ಎಚ್-1ಬಿ ವೀಸಾ ಸ್ಥಗಿತ ಪ್ರಶ್ನಿಸಿ 174 ಭಾರತೀಯರು ನ್ಯಾಯಾಲಯಕ್ಕೆ

Update: 2020-07-16 15:11 GMT

ವಾಶಿಂಗ್ಟನ್, ಜು. 16: ಎಚ್-1ಬಿ ವೀಸಾಗೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಏಳು ಅಪ್ತಾಪ್ತ ವಯಸ್ಕರು ಸೇರಿದಂತೆ 174 ಭಾರತೀಯರು ಅಮೆರಿಕ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ಮೊಕದ್ದಮೆ ಹೂಡಿದ್ದಾರೆ.

ಜೂನ್ 22ರಂದು ಹೊರಡಿಸಿದ ಆದೇಶದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎಚ್-1ಬಿ ಉದ್ಯೋಗ ವೀಸಾ ನೀಡುವುದನ್ನು ಈ ವರ್ಷದ ಕೊನೆಯವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಹಾಗಾಗಿ, ಈ ಭಾರತೀಯರು ಈಗ ಅಮೆರಿಕವನ್ನು ಪ್ರವೇಶಿಸುವಂತಿಲ್ಲ ಅಥವಾ ಅವರು ಎಚ್-1ಬಿ ವೀಸಾವನ್ನು ಪಡೆದುಕೊಳ್ಳುವಂತಿಲ್ಲ.

ಮೊಕದ್ದಮೆಯನ್ನು ಆಧರಿಸಿ, ಕೊಲಂಬಿಯ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕೇಟಂಜಿ ಬ್ರೌನ್ ಜಾಕ್ಸನ್ ಬುಧವಾರ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ, ಆಂತರಿಕ ಭದ್ರತಾ ಕಾರ್ಯದರ್ಶಿ ಚಾಡ್ ಎಫ್. ವುಲ್ಫ್ ಮತ್ತು ಕಾರ್ಮಿಕ ಕಾರ್ಯದರ್ಶಿ ಯೂಜಿನ್ ಸ್ಕೇಲಿಯರಿಗೆ ಸಮನ್ಸ್ಗಳನ್ನು ಜಾರಿಗೊಳಿಸಿದ್ದಾರೆ.

‘‘ಎಚ್-1ಬಿ/ಎಚ್-4 ವೀಸಾ ನಿಷೇಧ ಆದೇಶವು ಅಮೆರಿಕದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ, ಕುಟುಂಬಗಳನ್ನು ಬೇರ್ಪಡಿಸುತ್ತದೆ ಮತ್ತು ಸಂಸತ್ತು ಕಾಂಗ್ರೆಸ್ಸನ್ನು ಧಿಕ್ಕರಿಸುತ್ತದೆ’’ ಎಂದು 174 ಭಾರತೀಯರ ಪರವಾಗಿ ವಕೀಲ ವಾಸ್ಡನ್ ಬನಿಯಾಸ್ ಸಲ್ಲಿಸಿದ ಮೊಕದ್ದಮೆ ಹೇಳುತ್ತದೆ.

ಅಧ್ಯಕ್ಷರು ಹೊರಡಿಸಿದ ಆದೇಶವನ್ನು ಕಾನೂನುಬಾಹಿರ ಎಂಬುದಾಗಿ ಘೋಷಿಸಬೇಕೆಂದು ಮೊಕದ್ದಮೆಯು ನ್ಯಾಯಾಲಯವನ್ನು ಕೋರಿದೆ. ಹಾಗೂ, ಎಚ್-1ಬಿ ಮತ್ತು ಎಚ್-4 ವೀಸಾಗಳಿಗಾಗಿ ಸಲ್ಲಿಸಲಾಗಿರುವ ಹಾಗೂ ಬಾಕಿಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದ ನಿರ್ಧಾರವನ್ನು ಪ್ರಕಟಿಸುವಂತೆ ವಿದೇಶಾಂಗ ಇಲಾಖೆಗೆ ಸೂಚನೆ ನೀಡಬೇಕೆಂದೂ ಮೊಕದ್ದಮೆಯು ನ್ಯಾಯಾಲಯವನ್ನು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News