ಕ್ಷಮಾದಾನ ಅರ್ಜಿಗಳ ಅವಧಿಬದ್ಧ ಇತ್ಯರ್ಥಕ್ಕೆ ಮಾರ್ಗ ಸೂಚಿ ಕೋರಿದ್ದ ಅರ್ಜಿಗೆ ಪ್ರತಿಕ್ರಿಯಿಸಲು ಕೇಂದ್ರಕ್ಕೆ ಸೂಚನೆ

Update: 2020-07-16 16:59 GMT

ಹೊಸದಿಲ್ಲಿ, ಜು.16: ಮರಣದಂಡನೆ ಶಿಕ್ಷೆಗೆ ಒಳಗಾಗಿ, ಎಲ್ಲಾ ಕಾನೂನು ಪ್ರಕ್ರಿಯೆ ಕೊನೆಗೊಂಡು ಕ್ಷಮಾದಾನ ನೀಡಲು ಸಲ್ಲಿಸುವ ಮನವಿಗಳ ಅವಧಿಬದ್ಧ ಇತ್ಯರ್ಥ ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ಸಂಬಂಧಿಸಿದ ಪ್ರಾಧಿಕಾರಗಳು ಕ್ಷಮಾದಾನ ಅರ್ಜಿಯನ್ನು ಅವಧಿಬದ್ಧವಾಗಿ ಇತ್ಯರ್ಥಗೊಳಿಸಿ ತಮ್ಮ ಶಿಫಾರಸಿನೊಂದಿಗೆ ರಾಷ್ಟ್ರಪತಿಗಳಿಗೆ ಕಳುಹಿಸುವಂತೆ ಸೂಚಿಸಲು ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್ಎ ಬೋಬ್ಡೆ, ಆರ್ ಎಸ್ ರೆಡ್ಡಿ ಹಾಗೂ ಎಎಸ್ ಬೋಪಣ್ಣ ಅವರಿದ್ದ ನ್ಯಾಯಪೀಠ , ನೋಟಿಸ್ ಕಳುಹಿಸಿದೆ.

ಎಲ್ಲಾ ಕಾನೂನು ಪ್ರಕ್ರಿಯೆ ಅಂತ್ಯಗೊಂಡಿರುವವರಿಗೆ ಮರಣದಂಡನೆ ಶಿಕ್ಷೆ ಆದೇಶವನ್ನು ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಆದೇಶಿಸುವಂತೆ ಕೋರಿ ನ್ಯಾಯವಾದಿ ಸುಭಾಷ್ ವಿಜಯನ್ ಅರ್ಜಿ ಸಲ್ಲಿಸಿದ್ದರು. ಇನ್ನೂ ಕಾನೂನು ಪ್ರಕ್ರಿಯೆಯ ಅವಕಾಶ ಇರುವ ಆರೋಪಿಗಳಿಗೆ ನೋಟಿಸ್ ನೀಡಿ, ತಮಗೆ ಲಭ್ಯವಿರುವ ಅವಕಾಶವನ್ನು ನಿಗದಿ ಅವಧಿಯೊಳಗೆ ಬಳಸುವಂತೆ ತಿಳಿಸಬೇಕು. ಆ ಬಳಿಕ ಕಾನೂನಿಗೆ ಅನುಗುಣವಾಗಿ, ಮರಣದಂಡನೆ ಶಿಕ್ಷೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸುವಂತೆ ಅರ್ಜಿದಾರರು ಕೋರಿದ್ದರು.

 ಇದೇ ರೀತಿಯ ಅರ್ಜಿಯನ್ನು ಮೇ 27ರಂದು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವುದನ್ನು ಗಮನಿಸಿ, ಎರಡೂ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ಅಲ್ಲದೆ, ಕ್ಷಮಾ ದಾನ ಕೋರಿದ ಅರ್ಜಿಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ಸಮಯದ ಮಿತಿ ವಿಧಿಸುವ ಬಗ್ಗೆ ಗೃಹ ಸಚಿವಾಲಯಕ್ಕೆ ಸೂಚಿಸುವ ಬಗ್ಗೆ ಮಾತ್ರ ಪರಿಗಣಿಸಲು ಸಾಧ್ಯ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News