​ವಿಕಾಸ್ ದುಬೆಯದ್ದು ನಕಲಿ ಎನ್ ಕೌಂಟರ್ ಅಲ್ಲ: ಸುಪ್ರೀಂ ಕೋರ್ಟ್ ಗೆ ತಿಳಿಸಿದ ಉತ್ತರಪ್ರದೇಶ ಪೊಲೀಸರು

Update: 2020-07-17 17:37 GMT

ಹೊಸದಿಲ್ಲಿ, ಜು. 17: ರಾಜ್ಯ ಪೊಲೀಸರ ವಶದಲ್ಲಿದ್ದಾಗ ನಡೆದ ಉತ್ತರಪ್ರದೇಶದ ಭೂಗತ ಪಾತಕಿ ವಿಕಾಸ್ ದುಬೆಯ ಎನ್ ಕೌಂಟರ್  ನಕಲಿ ಎನ್ ಕೌಂಟರ್ ಅಲ್ಲ ಎಂದು ಉತ್ತರಪ್ರದೇಶ ಪೊಲೀಸರು ಶುಕ್ರವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.

ಮಧ್ಯಪ್ರದೇಶದಿಂದ ವಿಕಾಸ್ ದುಬೆಯನ್ನು ನಾಟಕೀಯವಾಗಿ ಬಂಧಿಸಿದ ಒಂದು ದಿನದ ಬಳಿಕ ಅಂದರೆ ಜುಲೈ 10ರಂದು ಉತ್ತರಪ್ರದೇಶ ಪೊಲೀಸರು, ‘‘ಕಾರು ಅಪಘಾತದ ಬಳಿಕ ಪರಾರಿಯಾಗಲು ಪ್ರಯತ್ನಿಸಿದ ವಿಕಾಸ್ ದುಬೆ ಪೊಲೀಸರು ಹಾರಿಸಿದ ಗುಂಡಿನಿಂದ ಮೃತಪಟ್ಟಿದ್ದಾನೆ’’ ಎಂದು ಘೋಷಿಸಿದ್ದರು.
ವಿಕಾಸ್ ದುಬೆ ಪೊಲೀಸರಿಂದ ಬಂದೂಕು ಕಿತ್ತುಕೊಂಡಿದ್ದಾನೆ ಹಾಗೂ ಗುಂಡು ಹಾರಿಸಿದ್ದಾನೆ. ನಾವು ಆತನನ್ನು ಜೀವಂತವಾಗಿ ಹಿಡಿಯಲು ಪ್ರಯತ್ನಿಸಿದೆವು ಎಂದು ಪೊಲೀಸರು ಪ್ರತಿಪಾದಿಸಿದ್ದರು. ‘‘ವಿಕಾಸ್ ದುಬೆಯ ಸಾವು ನಕಲಿ ಎನ್ ಕೌಂಟರ್ ಅಲ್ಲ. ಆತನ ಪ್ರಕರಣವನ್ನು ತೆಲಂಗಾಣ ಎನ್ ಕೌಂಟರ್ ನೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ತೆಲಂಗಾಣ ಸರಕಾರ ವಿಚಾರಣಾ ಆಯೋಗಕ್ಕೆ ಆದೇಶ ನೀಡಿಲ್ಲ. ಅದೇ ರೀತಿ ಉತ್ತರ ಪ್ರದೇಶ ಸರಕಾರ ಕೂಡ ವಿಚಾರಣಾ ಆಯೋಗಕ್ಕೆ ಆದೇಶ ನೀಡಿಲ್ಲ’’ ಎಂದು ಉತ್ತರಪ್ರದೇಶ ಪೊಲೀಸ್ ಡಿ.ಜಿ. ಅಫಿದಾವಿತ್ ನಲ್ಲಿ ತಿಳಿಸಿದ್ದಾರೆ. 
‘‘ಪೊಲೀಸರು ಕಾನೂನು ಹಾಗೂ ಸುಪ್ರೀಂ ಕೋರ್ಟ್ ನ ಮಾರ್ಗಸೂಚಿಯ ಪ್ರಕಾರ ಕಾರ್ಯ ನಿರ್ವಹಿಸಿದ್ದಾರೆ. ಕಾಲಾವಕಾಶ ನೀಡಿದರೆ ಇನ್ನಷ್ಟು ಸತ್ಯಾಂಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’’ ಎಂದು ಅವರು ತಿಳಿಸಿದ್ದಾರೆ. ವಿಕಾಸ್ ದುಬೆ ಪ್ರಕರಣ ತೆಲಂಗಾಣ ಎನ್ ಕೌಂಟರ್ ಗಿಂತ ಭಿನ್ನವಾಗಿದೆ. ತೆಲಂಗಾಣ ಎನ್ ಕೌಂಟರ್ ನ ಆರೋಪಿ ಕಠಿಣ ಕ್ರಿಮಿನಲ್ ಅಲ್ಲ. ಆದರೆ, ವಿಕಾಸ್ ದುಬೆ ವಿರುದ್ಧ 64 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದರು. ವಿಕಾಸ್ ದುಬೆ ಪ್ರಕರಣದ ವಿಚಾರಣಾ ಆಯೋಗದ ನೇತೃತ್ವದವನ್ನು ನಿವೃತ್ತ ನ್ಯಾಯಮೂರ್ತಿಗಳು ವಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News