ಜಮ್ಮು-ಕಾಶ್ಮೀರ: 24 ಗಂಟೆಯಲ್ಲಿ 6 ಭಯೋತ್ಪಾದಕರ ಹತ್ಯೆ
ಹೊಸದಿಲ್ಲಿ, ಜು.18: ಜಮ್ಮು-ಕಾಶ್ಮೀರದಲ್ಲಿ ಇಂದು ಬೆಳಗ್ಗೆ ನಡೆಸಲಾಗಿರುವ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಸೋಪಿಯಾನ್ ಜಿಲ್ಲೆಯ ಅಮ್ಶಿಪೊರಾ ಗ್ರಾಮದಲ್ಲಿ ಎನ್‌ಕೌಂಟರ್ ನಡೆಸಲಾಗಿದೆ.
ಅಮ್ಶಿಪೊರಾ ಹಳ್ಳಿಯಲ್ಲಿ ಉಗ್ರರು ಅಡಗಿಕುಳಿತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಇಂದು ಶೋಧ ಕಾರ್ಯಾಚರಣೆ ನಡೆಸಿದ್ದವು. ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಶೋಧ ಕಾರ್ಯಾಚರಣೆಯು ಎನ್‌ಕೌಂಟರ್ ಆಗಿ ಪರಿವರ್ತಿತವಾಯಿತು.
ಕುಲ್ಗಾಂನಲ್ಲಿ ಇದೇ ರೀತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೈಶ್ ಮೊಹಮ್ಮದ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್‌ಸಹಿತ ಮೂವರು ಉಗ್ರರು ಹತರಾದ 24 ಗಂಟೆಗಳ ಬಳಿಕ ಸೋಪಿಯಾನ್ ಜಿಲ್ಲೆಯಲ್ಲಿ ಎನ್‌ಕೌಂಟರ್ ನಡೆದಿದೆ. ಕುಲ್ಗಾಂನಲ್ಲಿ ಹತನಾಗಿರುವ ಜೈಶ್ ಕಮಾಂಡರ್ ಐಇಡಿ ತಜ್ಞನಾಗಿದ್ದಾನೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಐಇಡಿ ದಾಳಿ ಸಹಿತ ಭದ್ರತಾ ಪಡೆಗಳ ಮೇಲೆ ನಡೆದಿರುವ ಹಲವು ದಾಳಿಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.