ಪೈಲಟ್ ಬಣ ತಂಗಿದ್ದ ಹರ್ಯಾಣ ರೆಸಾರ್ಟ್ ನಿಂದ ಬರಿಗೈಯಲ್ಲಿ ವಾಪಸಾದ ರಾಜಸ್ಥಾನ ಪೊಲೀಸರು
ಹೊಸದಿಲ್ಲಿ, ಜು.18: ಹರ್ಯಾಣದ ಎರಡು ರೆಸಾರ್ಟ್ ಗಳಲ್ಲಿ ಬೀಡುಬಿಟ್ಟಿರುವ ಸಚಿನ್ ಪೈಲಟ್ ಬಣದ 18 ಕಾಂಗ್ರೆಸ್ ಶಾಸಕರು ತಂಗಿದ್ದ ಹರ್ಯಾಣದ ಮನೆಸರ್‌ಗೆ ತೆರಳಿದ್ದ ರಾಜಸ್ಥಾನ ಪೊಲೀಸರ ತಂಡ ಬರಿಗೈಯಲ್ಲಿ ವಾಪಸಾಗಿದೆ. ಪೊಲೀಸರಿಗೆ ಯಾವುದೇ ಬಂಡಾಯ ಶಾಸಕರು ಕೈಗೆ ಸಿಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಜಸ್ಥಾನ ಪೊಲೀಸ್‌ನ ವಿಶೇಷ ಕಾರ್ಯಾಚರಣಾ ಗುಂಪು(ಎಸ್‌ಒಜಿ) ಭನ್ವರ್‌ಲಾಲ್ ಶರ್ಮಾರ ಧ್ವನಿ ಮಾದರಿಯನ್ನು ಸಂಗ್ರಹಿಸಲು ರೆಸಾರ್ಟ್ ಗೆ ತೆರಳಿತ್ತು. ಶರ್ಮಾ ವಿರುದ್ದ ಬಿಜೆಪಿಯೊಂದಿಗೆ ಸರಕಾರವನ್ನು ಬೀಳಿಸಲು ಡೀಲ್ ನಡೆಸಿದ ಆರೋಪ ಕೇಳಿಬಂದಿದೆ.
ರಾಜಸ್ಥಾನ ಪೊಲೀಸರನ್ನು ರೆಸಾರ್ಟ್ ಒಳಗೆ ಪ್ರವೇಶಿಸಲು ಹರ್ಯಾಣದ ಪೊಲೀಸರು ಅವಕಾಶ ನೀಡದೆ ರಾಜಸ್ಥಾನ ಪೊಲೀಸರ ವಾಹನವನ್ನು ಕೆಲವು ಗಂಟೆಗಳ ಕಾಲ ಮನೆಸರ್ ಹೊಟೇಲ್‌ನ ಹೊರಗೆ ತಡೆದಿದ್ದಾರೆ. ಬಳಿಕ ಪೊಲೀಸ್ ವಾಹನ ಹೊಟೇಲ್ ಕಂಪೌಂಡ್‌ನೊಳಗೆ ಇರುವುದು ಕಂಡುಬಂದಿತು. ಬಿಜೆಪಿ ಆಡಳಿತವಿರುವ ಹರ್ಯಾಣ ಸರಕಾರವು ರಾಜಸ್ಥಾನದ ಪೊಲೀಸರಿಗೆ ಯಾವುದೆ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.