ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕರಾಳ ಮುಖ ಬಹಿರಂಗಪಡಿಸಿದ ಮಖಾಯ ಎಂಟಿನಿ
ಜೊಹಾನ್ಸ್ ಬರ್ಗ್: ತನ್ನನ್ನು ತಂಡದ ಸದಸ್ಯರು ಪ್ರತ್ಯೇಕವೆಂಬಂತೆ ನೋಡಿಕೊಂಡಿದ್ದರು, ತಾನು ಯಾವತ್ತೂ ಒಬ್ಬಂಟಿಯಾಗಿದ್ದೆ ಎಂದು ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ವೇಗಿ ಮಖಾಯ ಎಂಟಿನಿ ಆರೋಪಿಸಿರುವುದು ದೇಶದ ಕ್ರಿಕೆಟ್ ಕ್ಷೇತ್ರದಲ್ಲಿ ಬಿರುಗಾಳಿಯೆಬ್ಬಿಸುವ ಸಾಧ್ಯತೆಯಿದೆ.
ಕಪ್ಪು ವರ್ಣೀಯರ ಪರ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಅಭಿಯಾನಕ್ಕೆ ಬಹಿರಂಗವಾಗಿ ಬೆಂಬಲ ಘೋಷಿಸಿರುವ ದಕ್ಷಿಣ ಆಫ್ರಿಕಾದ 30 ಮಂದಿ ಮಾಜಿ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಮಖಾಯ ಅವರು ಸೌತ್ ಆಫ್ರಿಕನ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಶನ್ ಗೆ ನೀಡಿದ್ದ ಸಂದರ್ಶನದ ವೇಳೆ ಮೇಲಿನಂತೆ ಹೇಳಿದ್ದಾರೆ.
“ಡಿನ್ನರ್‍ಗೆ ಹೋಗುವ ಎಂದು ಯಾರೂ ನನ್ನ ಬಾಗಿಲು ತಟ್ಟಿರಲಿಲ್ಲ, ತಂಡದ ಸದಸ್ಯರು ನನ್ನೆದುರೇ ತಮ್ಮ ಡಿನ್ನರ್ ಯೋಜನೆಗಳ ಕುರಿತು ಮಾತನಾಡುತ್ತಿದ್ದರೂ ನನ್ನನ್ನು ಕೈಬಿಟ್ಟಿದ್ದರು. ಉಪಾಹಾರ ಕೊಠಡಿಗೆ ತೆರಳಿದಾಗಲೂ ಯಾರೂ ನನ್ನ ಪಕ್ಕ ಕುಳಿತುಕೊಳ್ಳಲು ಬರುತ್ತಿರಲಿಲ್ಲ. ನಾವೆಲ್ಲರೂ ಒಂದೇ ಸಮವಸ್ತ್ರ ಧರಿಸಿ ಒಂದೇ ರಾಷ್ಟ್ರಗೀತೆ ಹಾಡುತ್ತಿದ್ದರೂ ನಾನು ಅದನ್ನು(ಪ್ರತ್ಯೇಕತೆ) ಸಹಿಸಿಕೊಳ್ಳಬೇಕಿತ್ತು'' ಎಂದಿದ್ದಾರೆ.
ತಂಡದ ಬಸ್ ನಲ್ಲಿ ಸ್ಟೇಡಿಯಂಗೆ ತೆರಳುವುದನ್ನು ತಪ್ಪಿಸಿ ಅಲ್ಲಿಯ ತನಕ ಓಡಿಕೊಂಡೇ ಹೋಗಲು ತಾವು ಬಯಸಿದ್ದಾಗಿ ಹೇಳಿಕೊಂಡಿದ್ದಾರೆ. “ಬಸ್ ಚಾಲಕನನ್ನು ಕಂಡು ನನ್ನ ಬ್ಯಾಗ್ ನೀಡಿ ನಂತರ ನಾನು ಮೈದಾನ ತನಕ ಓಡುತ್ತಿದ್ದ. ಹಿಂದೆ ಬರುವಾಗಲೂ ಹಾಗೆಯೇ ಮಾಡುತ್ತಿದ್ದೆ. ನಾನೇಕೆ ಹಾಗೆ ಮಾಡುತ್ತಿದ್ದೇನೆಂದು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಯಾರಿಗೂ ಈ ಕುರಿತು ನಾನು ಹೇಳಿಕೊಳ್ಳಲಿಲ್ಲ. ನಾನು ನನ್ನ ಏಕಾಂಗಿತನದಿಂದ ಓಡುತ್ತಿದ್ದೆ. ನಾನು ಬಸ್ ನಲ್ಲಿ ಕುಳಿತರೆ ಅವರು ಎದ್ದು ಮುಂದಿನ ಸೀಟ್ ನಲ್ಲಿ ಕುಳಿತುಕೊಳ್ಳುತ್ತಿದ್ದರು. ನಾವು ಗೆದ್ದಾಗ ಖುಷಿಯಿತ್ತು. ಆದರೆ ಸೋತಾಗ ನನ್ನನ್ನು ಮೊದಲು ದೂರಲಾಗುತ್ತಿತ್ತು,'' ಎಂದು ಹೇಳಿದ ಮಖಾಯ ತಮ್ಮ ಪುತ್ರ ಕೂಡ ಇದೇ ರೀತಿ ಜನಾಂಗೀಯ ಅವಮಾನ ಎದುರಿಸಬೇಕಿತ್ತು ಎಂದರು.