×
Ad

ದೇಶದಲ್ಲಿ ಒಂದೇ ದಿನ 38 ಸಾವಿರ ಕೊರೋನ ಪ್ರಕರಣ; ವಾರದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಸಾವು

Update: 2020-07-19 09:16 IST

ಹೊಸದಿಲ್ಲಿ, ಜು.19: ದೇಶದಲ್ಲಿ ಶನಿವಾರ ಒಂದೇ ದಿನ 38 ಸಾವಿರಕ್ಕೂ ಅಧಿಕ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. 545 ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 27 ಸಾವಿರದ ಸನಿಹಕ್ಕೆ ಬಂದಿದೆ.

ವಾರದಲ್ಲಿ ನಾಲ್ಕನೇ ಬಾರಿಗೆ ಗರಿಷ್ಠ ಪ್ರಕರಣಗಳ ಹೊಸ ದಾಖಲೆ ನಿರ್ಮಾಣವಾಗಿದ್ದು, ಮಂಗಳವಾರ ಮೊಟ್ಟಮೊದಲ ಬಾರಿಗೆ ದಿನದ ಪ್ರಕರಣಗಳ ಸಂಖ್ಯೆ 30 ಸಾವಿರದ ಗಡಿ ದಾಟಿತ್ತು. ಶನಿವಾರ 38,141 ಪ್ರಕರಣಗಳು ವರದಿಯಾಗಿವೆ. ಕಳೆದ ಶನಿವಾರದಿಂದ ಒಂದು ವಾರದ ಅವಧಿಯಲ್ಲಿ 4,127 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಂದೇ ವಾರದಲ್ಲಿ ಗರಿಷ್ಠ ಸಂಖ್ಯೆಯ ಸೋಂಕಿತರು ಮೃತಪಟ್ಟಂತಾಗಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಿದ ಎರಡೇ ದಿನದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,76,861 ಆಗಿದೆ. ದೇಶದಲ್ಲಿ 3.74 ಲಕ್ಷ ಸಕ್ರಿಯ ಪ್ರಕರಣಗಳಿದ್ದು, 6.75 ಲಕ್ಷ ಮಂದಿ (ಶೇಕಡ 63) ಗುಣಮುಖರಾಗಿದ್ದಾರೆ. ಇದುವರೆಗೆ ಕೋವಿಡ್-19 ಸೋಂಕಿನಿಂದಾಗಿ ದೇಶದಲ್ಲಿ ಮೃತಪಟ್ಟ ಒಟ್ಟು ರೋಗಿಗಳ ಪೈಕಿ ಶೇಕಡ 15ರಷ್ಟು ಮಂದಿ ಕಳೆದ ಒಂದು ವಾರದಲ್ಲಿ ಸಾವನ್ನಪ್ಪಿದ್ದು, ಇತ್ತೀಚಿನ ದಿನಗಳಲ್ಲಿ ಸಾವು ಹೆಚ್ಚುತ್ತಿರುವುದರ ಸೂಚಕವಾಗಿದೆ. ಆದಾಗ್ಯೂ ನಾಲ್ಕು ದಿನಗಳಲ್ಲಿ ಮೊದಲ ಬಾರಿಗೆ 600ಕ್ಕಿಂತ ಕಡಿಮೆ ಸಾವಿನ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 26,787.

ಮಹಾರಾಷ್ಟ್ರ ಶನಿವಾರ ಎರಡನೇ ಗರಿಷ್ಠ ಸಂಖ್ಯೆ ಪ್ರಕರಣ (8,348)ಗಳನ್ನು ಕಂಡಿದ್ದರೆ, ತಮಿಳುನಾಡು (4,807), ಕರ್ನಾಟಕ (4,537), ಆಂಧ್ರಪ್ರದೇಶ (3,963), ಬಂಗಾಳ (2,198), ಅಸ್ಸಾಂ (1,218) ಮತ್ತು ಗುಜರಾತ್ (960) ಗರಿಷ್ಠ ಪ್ರಕರಣಗಳನ್ನು ದಾಖಲಿಸಿವೆ.

ಶನಿವಾರ ತಮಿಳುನಾಡಿನಲ್ಲಿ 88 ಹಾಗೂ ಆಂಧ್ರ ಪ್ರದೇಶದಲ್ಲಿ 52 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News