ಎಂಆರ್‌ಪಿಗಿಂತ ಅಧಿಕ ಬೆಲೆಗೆ ಮಾರಾಟ ಮಾಡಿದರೆ ಕಾದಿದೆ ಕಠಿಣ ಶಿಕ್ಷೆ!
ಹೊಸದಿಲ್ಲಿ, ಜು.19: ಯಾವುದೇ ಪ್ಯಾಕ್ ಮಾಡಿದ ವಸ್ತುಗಳನ್ನು ಪ್ಯಾಕ್‌ನಲ್ಲಿ ನಮೂದಿಸಿದ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ)ಗಿಂತ ಅಧಿಕ ದರದಲ್ಲಿ ಮಾರಾಟ ಮಾಡಿದರೆ 5ರಿಂದ 15 ಸಾವಿರ ರೂಪಾಯಿವರೆಗೆ ದಂಡ ವಿಧಿಸುವ ಪ್ರಸ್ತಾವವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಮುಂದಿಟ್ಟಿದೆ. ಅಂತೆಯೇ ಪದೇ ಈ ದಂಧೆ ನಡೆಸುವುದು ದೃಢಪಟ್ಟರೆ ಹತ್ತು ಲಕ್ಷ ರೂಪಾಯಿವರೆಗೂ ದಂಡ ವಿಧಿಸಲು ಉದ್ದೇಶಿಸಿದೆ.
ಕಾನೂನು ಮಾಪನಶಾಸ್ತ್ರ ಕಾಯ್ದೆಯ ಸಮಗ್ರ ಪರಿಷ್ಕರಣೆಗೆ ಸಚಿವಾಲಯ ಮುಂದಾಗಿದ್ದು, ಪದೇಪದೇ ಎಂಆರ್‌ಪಿ ನಿಯಮ ಉಲ್ಲಂಘಿಸಿದರೆ 10 ಲಕ್ಷ ರೂಪಾಯಿವರೆಗೆ ದಂಡ ಹಾಗೂ ಲೈಸನ್ಸ್ ರದ್ದತಿಗೆ ಕೂಡಾ ಪ್ರಸ್ತಾವಿಸಲಾಗಿದೆ.
ಪಾಕೇಜ್ಡ್ ಕುಡಿಯುವ ನೀರು, ಆಹಾರ ಉತ್ಪನ್ನಗಳು ಮತ್ತು ಇತರ ಗ್ರಾಹಕ ವಸ್ತುಗಳಿಗೆ ಇದು ಅನ್ವಯವಾಗಲಿದೆ. ಸದ್ಯ ಇದು ಕೇವಲ ಪ್ಯಾಕ್ ಮಾಡಲಾದ ವಸ್ತುಗಳುಗೆ ಮಾತ್ರ ಅನ್ವಯವಾಗುತ್ತದೆ. ಅಧಿಕ ಬೆಲೆಗೆ ಮಾರಾಟ ಮಾಡಿದರೆ 5000 ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ.
ತಿದ್ದುಪಡಿ ಕಾಯ್ದೆಯು ಇಂಥ ಪ್ರಕರಣಗಳನ್ನು ಅಪರಾಧ ಎಂದು ಪರಿಗಣಿಸದೇ ಕಾಯ್ದೆ ಉಲ್ಲಂಘನೆಗೆ ಕೇವಲ ದಂಡ ವಿಧಿಸಲು ಉದ್ದೇಶಿಸಲಾಗಿದೆ. ಪ್ರಸ್ತಾವಿತ ಮಸೂದೆ ಆಂಗೀಕಾರವಾದರೆ ಜೈಲು ಶಿಕ್ಷೆ ತಪ್ಪಲಿದೆ.
ಅಂತೆಯೇ ಕಾಯ್ದೆಗೆ ಮತ್ತೊಂದು ಮಹತ್ವದ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು, ಇದರ ಅನ್ವಯ ನಮೂದಿಸಲಾದ ನಿಗದಿತ ತೂಕದಷ್ಟು ವಸ್ತುಗಳು ಪ್ಯಾಕ್‌ನಲ್ಲಿಲ್ಲದಿದ್ದಲ್ಲಿ, ಅದನ್ನು ಉತ್ಪಾದಿಸುವ ಮತ್ತು ಮಾರಾಟ ಮಾಡುವವರು ದಂಡ ತೆರಬೇಕಾಗುತ್ತದೆ. ಇಂಥ ಪ್ರಕರಣಗಳಲ್ಲಿ ತಪ್ಪತಸ್ಥರೆನಿಸಿದವರ ಹೆಸರು, ವಹಿವಾಟಿನ ಸ್ಥಳ ಮತ್ತು ಕಂಪನಿಯ ಇತರ ವಿವರಗಳನ್ನು ಬಹಿರಂಗಪಡಿಸಲು ನ್ಯಾಯಾಲಯಕ್ಕೆ ಅನುಮತಿ ನೀಡುವುದೂ ಹೊಸ ತಿದ್ದುಪಡಿಯಲ್ಲಿ ಸೇರಿದೆ.