ಮನೆಗೆಲಸದಾಕೆಯ ಮಗಳು ರಾಜ್ಯಕ್ಕೆ ಟಾಪರ್
ಜೆಮ್‌ಶೆಡ್‌ಪುರ, ಜು.19: ಜಾರ್ಖಂಡ್ ರಾಜ್ಯ ಪರೀಕ್ಷಾ ಮಂಡಳಿ ನಡೆಸಿದ 12ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಟೈಲರ್ ಹಾಗೂ ಮನೆಗೆಲಸದಾಕೆಯ ಪುತ್ರಿ ರಾಜ್ಯಕ್ಕೇ ಪ್ರಥಮ ರ್ಯಾಂಕ್ ಪಡೆದಿದ್ದಾಳೆ.
ಜೆಮ್‌ಶೆಡ್‌ಪುರ ಮಹಿಳಾ ಕಾಲೇಜಿನ ಇಂಟರ್ ಮೀಡಿಯೆಟ್ ವಿದ್ಯಾರ್ಥಿನಿಯಾಗಿರುವ ನಂದಿತಾ 500 ಅಂಕಗಳ ಪೈಕಿ 419 ಅಂಕ ಪಡೆದಿದ್ದಾಳೆ. ''ನಾನು ಉತ್ತಮ ಫಲಿತಾಂಶ ನಿರೀಕ್ಷಿಸುತ್ತಿದ್ದೆ. ಆದರೆ ರಾಜ್ಯಕ್ಕೆ ಪ್ರಥಮ ಸ್ಥಾನ ನಿರೀಕ್ಷಿಸಿರಲಿಲ್ಲ'' ಎಂದು ವಿದ್ಯಾರ್ಥಿನಿ ಸಂತಸ ವ್ಯಕ್ತಪಡಿಸಿದಳು.
ರಾಜೇಶ್ ಹರಿಪಾಲ್ ಹಾಗೂ ರಶ್ಮಿ ಅವರ ಮಕ್ಕಳಲ್ಲಿ ಹಿರಿಯಳಾದ ನಂದಿತಾ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದರೂ, ಮುಂದೆ ಶುಲ್ಕ ಕಟ್ಟಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಓದನ್ನು ನಿಲ್ಲಿಸಲು ಪೋಷಕರು ನಿರ್ಧರಿಸಿದ್ದರು. ನಂದಿತಾ ಕಿಂಡರ್‌ಗಾರ್ಟೆನ್ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಟ್ಯೂಷನ್ ನೀಡಲು ಆರಂಭಿಸಿದ ಬಳಿಕ ಶಿಕ್ಷಣ ಮುಂದುವರಿಸುವ ನಿರ್ಧಾರವನ್ನು ಆಕೆಗೇ ಬಿಟ್ಟರು.
ಯಾವುದೇ ಟ್ಯೂಶನ್ ಇಲ್ಲದೇ ನಂದಿತಾ ಹಿಂದಿಯಲ್ಲಿ 90, ಭೂಗೋಳಶಾಸ್ತ್ರದಲ್ಲಿ 88, ಇತಿಹಾಸದಲ್ಲಿ 85, ಇಂಗ್ಲಿಷ್‌ನಲ್ಲಿ 82 ಹಾಗೂ ರಾಜಕೀಯ ಶಾಸ್ತ್ರದಲ್ಲಿ 74 ಅಂಕ ಪಡೆದು ರಾಜ್ಯದಲ್ಲೇ ಗರಿಷ್ಠ ಅಂಕ ಪಡೆದಿದ್ದಾಳೆ.
''ನಾನು ಮಕ್ಕಳಿಗೆ ಟ್ಯೂಷನ್ ನೀಡಿದ ಹಣದಲ್ಲೇ ನನ್ನ ಶಾಲಾ ಶುಲ್ಕ ಪಾವತಿಸಿದೆ. ನನಗೆ ಕಲಿಕೆಯಲ್ಲೇ ಆಸಕ್ತಿ. ಎಷ್ಟೇ ಕಷ್ಟ ಬಂದರೂ ಓದು ಮುಂದುವರಿಸುತ್ತೇನೆ'' ಎಂದು ಡಿಬಿಎಂಎಸ್ ಕದ್ಮಾ ಹೈಸ್ಕೂಲ್‌ನಲ್ಲಿ ಹತ್ತನೇ ತರಗತಿವರೆಗೆ ಓದಿದ್ದ ನಂದಿತಾ ವಿವರಿಸಿದರು. ಸಮೂಹ ಸಂವಹನ ವಿಷಯದಲ್ಲಿ ಪದವಿ ಪಡೆದು ಐಎಎಸ್ ಅಧಿಕಾರಿಯಾಗುವ ಗುರಿ ಅವರದ್ದು.
ಜೆಮ್‌ಶೆಡ್‌ಪುರ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಶುಕ್ಲಾ ಮೊಹಾಂತಿ, ಶನಿವಾರ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ನಗದು ಬಹುಮಾನ, ಬೆಳ್ಳಿ ನಾಣ್ಯ ಹಾಗೂ ವಾಚೊಂದನ್ನು ಉಡುಗೊರೆಯಾಗಿ ನೀಡಿದರು. ಮನೆಯ ಕಷ್ಟ ಓದಿಗೆ ಅಡ್ಡಿಯಾಗಬಾರದು ಎಂಬಾಕೆಯ ಮನೋಭಾವ ಅಸಾಧಾರಣ. ಇಡೀ ಕಾಲೇಜು ಆಕೆಯ ಬಗ್ಗೆ ಹೆಮ್ಮೆಪಡುತ್ತಿದೆ ಎಂದು ಅವರು ಹೇಳಿದರು.