ಸ್ನೇಹಿತನ ವರ್ಗಾವಣೆ ರದ್ದತಿಗಾಗಿ ಗೃಹಸಚಿವರ ಪಿಎ ಆದ ವಂಚಕನ ಬಂಧನ
ಹೊಸದಿಲ್ಲಿ, ಜು.19: ಗೃಹ ಸಚಿವ ಅಮಿತ್ ಶಾ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಆಪ್ತ ಸಹಾಯಕರಿಗೆ ಕರೆ ಮಾಡಿ ಗ್ವಾಲಿಯರ್‌ಗೆ ವರ್ಗಾವಣೆಯಾಗಿರುವ ತನ್ನ ಸ್ನೇಹಿತನ ವರ್ಗಾವಣೆ ರದ್ದುಪಡಿಸುವಂತೆ ಮನವಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಅಭಿಷೇಕ್ ದ್ವಿವೇದಿ ಅಕಾ ಶಿಬು ಎಂಬಾತ ಜುಲೈ 3ರಂದು ಶಾ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿಯವರ ಕಚೇರಿಗೆ ಕರೆ ಮಾಡಿದ್ದಾನೆ. ಗ್ವಾಲಿಯರ್‌ನ ಪರಿವಾಹನ್ ಆಯುಕ್ತ ಕಾರ್ಯಾಲಯಕ್ಕೆ ವರ್ಗಾವಣೆಯಾಗಿರುವ ತನ್ನ ಸ್ನೇಹಿತ ಪರಿವಾಹನ ನಿರೀಕ್ಷಕನ ವರ್ಗಾವಣೆ ರದ್ದುಪಡಿಸುವಂತೆ ಕೋರಿದ್ದಾನೆ.
ಸಿಬ್ಬಂದಿ ತಕ್ಷಣ ಗಡ್ಕರಿಯವರ ಕಚೇರಿಗೆ ಮತ್ತು ಗೃಹಸಚಿವರ ಆಪ್ತ ಸಹಾಯಕರಿಗೆ ಕರೆ ಮಾಡಿದ್ದಾರೆ. ತಕ್ಷಣ ಗೃಹಸಚಿವರ ಆಪ್ತ ಕಾರ್ಯದರ್ಶಿ ಈ ಸಂಬಂಧ ದೂರು ದಾಖಲಿಸಿದ್ದಾರೆ.
ಈತನ ಮೊಬೈಲ್ ಸಂಖ್ಯೆಯ ಹಿನ್ನೆಲೆಯಲ್ಲಿ ಪತ್ತೆ ಮಾಡಿದಾಗ ಈ ವ್ಯಕ್ತಿ ಮಧ್ಯಪ್ರದೇಶದವನಾಗಿದ್ದು, ಸದ್ಯ ಮುಂಬೈನಲ್ಲಿರುವುದು ಪತ್ತೆಯಾಗಿದೆ. ಮುಂಬೈನ ಹಲವೆಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರು ಹುಡುಕುತ್ತಿರುವ ಸುಳಿವು ದೊರಕಿ ಈತ ಮುಂಬೈಗೆ ಪಲಾಯನ ಮಾಡಿರಬೇಕು ಎಂದು ಶಂಕಿಸಲಾಗಿದೆ.
ಅಂತಿಮವಾಗಿ ಈತನನ್ನು ಇಂಧೋರ್‌ನಲ್ಲಿ ಬಂಧಿಸಲಾಗಿದೆ. ಕರೆ ಮಾಡಿದ ಮೊಬೈಲ್ ಹಾಗೂ ಸಿಮ್‌ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ತನ್ನ ಬಾಲ್ಯ ಸ್ನೇಹಿತ ವಿನಯ್ ಸಿಂಗ್ ಬಘೇಲ್ ಎಂಬಾತ ವರ್ಗಾವಣೆ ಆದೇಶ ರದ್ದುಪಡಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಕರೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾರೆ.