ಸ್ವಪ್ನಾ ಬರ್ಮನ್ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಯ ವರ್ಗಾವಣೆ
ಕೋಲ್ಕತಾ: ಅಥ್ಲೀಟ್ ಸ್ವಪ್ನಾ ಬರ್ಮನ್ ಮನೆಯ ಮೇಲೆ ದಾಳಿ ನಡೆಸಿದ ಅರಣ್ಯ ಅಧಿಕಾರಿಯನ್ನು ವರ್ಗಾವಣೆಗೊಳಿಸಿರುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದಿದೆ.
ಮನೆಯಲ್ಲಿ ಮರ ಮಟ್ಟುಗಳು ಪತ್ತೆಯಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬರ್ಮನ್‌ಗೆ ಕ್ಲೀನ್ ಚಿಟ್ ನೀಡಿದ್ದರು. ದಾಳಿ ನಡೆಸಿದ ಬೈಕುಂಠಾಪುರ ಅರಣ್ಯ ವಿಭಾಗದ ಬೆಲಕೋಬಾ ವಲಯ ಅರಣ್ಯಾಧಿಕಾರಿ ಸಂಜಯ್ ದತ್ತಾ ಅವರನ್ನು ವರ್ಗಾವಣೆಗೊಳಿಸಲು ರಾಜ್ಯ ಸರಕಾರ ಆದೇಶಿಸಿತ್ತು.
ಅರ್ಜುನ ಪ್ರಶಸ್ತಿ ಪುರಸ್ಕೃತ ಅಥ್ಲೀಟ್ ಸ್ವಪ್ನಾ ಬರ್ಮನ್ ಅವರ ಜಲ್ಪೈಗುರಿ ನಿವಾಸದಲ್ಲಿ ಅಕ್ರಮ ಮರಗಳನ್ನು ಇಟ್ಟುಕೊಂಡಿದ್ದಕ್ಕಾಗಿ ಅರಣ್ಯ ಇಲಾಖೆ ದಾಳಿ ನಡೆಸಿತ್ತು. ದಾಳಿ ನಡೆಸಿದ ಅಧಿಕಾರಿಯನ್ನು ವರ್ಗಾವಣೆಗೊಳಿಸುವ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಾಗ ಇದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಸರಕಾರದ ಆದೇಶದ ವಿರುದ್ಧ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದ್ದು, ಅರಣ್ಯ ಅಧಿಕಾರಿಯ ವರ್ಗಾವಣೆಯನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಜುಲೈ 13 ರಂದು ದತ್ತಾ ಮತ್ತು ಅವರ ತಂಡ ಇಲ್ಲಿಗೆ ಹತ್ತಿರದ ಪಟ್ಕಾಟಾ ಪ್ರದೇಶದಲ್ಲಿ ಬಂಗಾಳ ಕ್ರೀಡಾಪಟುವಿನ ಮನೆಯ ಮೇಲೆ ದಾಳಿ ನಡೆಸಿ ಅಕ್ರಮ ಮರಗಳನ್ನು ಪತ್ತೆ ಮಾಡಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. ಬರ್ಮನ್ ಅವರ ನಿವಾಸದಲ್ಲಿ ಪತ್ತೆಯಾದ ಮರಗಳಿಗೆ ಯಾವುದೇ ದಾಖಲೆ ಇಲ್ಲ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದರು.
‘‘ಸ್ವಪ್ನಾ ಬರ್ಮನ್ ತನ್ನ ಮನೆ ನಿರ್ಮಿಸಲು ಮರ ಖರೀದಿಸಿದ್ದಾರೆ. ಅವರು ರಾಜ್‌ಬಂಶಿ ಸಮುದಾಯದ ಉತ್ತಮ ಆಟಗಾರ್ತಿ. ನಾನು ಅವರನ್ನು ಗೌರವಿಸುತ್ತೇನೆ. ಸರಕಾರಕ್ಕೆ ಮಾಹಿತಿ ನೀಡದೆ ಅರಣ್ಯ ಇಲಾಖೆಯು ಕೆಲವರು ಆಕೆಯ ನಿವಾಸದ ಮೇಲೆ ದಾಳಿ ನಡೆಸಿದರು. ಅರಣ್ಯ ಅಧಿಕಾರಿಗಳು ನಮ್ಮನ್ನು ಕೇಳಿದ್ದರೆ, ನಾವು ಅವರಿಗೆ ದಾಳಿ ನಡೆಸಲು ಅವಕಾಶ ನೀಡುತ್ತಿರಲಿಲ್ಲ ’’ಎಂದು ಬ್ಯಾನರ್ಜಿ ಹೇಳಿದ್ದಾರೆ.
ಬರ್ಮನ್ 2018 ರ ಏಶ್ಯನ್ ಕ್ರೀಡಾಕೂಟದಲ್ಲಿ ಹೆಪ್ಟಾಥ್ಲಾನ್‌ನಲ್ಲಿ ಚಿನ್ನ ಗೆದ್ದಿದ್ದರು.