ಬಿಜೆಪಿ ಸೇರಲು ರೂ. 35 ಕೋಟಿ ಆಫರ್ ಮಾಡಿದ ಸಚಿನ್ ಪೈಲಟ್: ಕಾಂಗ್ರೆಸ್ ಶಾಸಕನ ಆರೋಪ

Update: 2020-07-20 10:51 GMT
ಸಚಿನ್ ಪೈಲಟ್

ಜೈಪುರ್: ಬಿಜೆಪಿ ಸೇರಲು ತಮಗೆ ಸಚಿನ್ ಪೈಲಟ್ ರೂ. 35 ಕೋಟಿ ಆಫರ್ ಮಾಡಿದ್ದರೂ ತಾನು ನಿರಾಕರಿಸಿದ್ದಾಗಿ ಬರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಹೇಳಿದ್ದಾರೆ.

ಜೈಪುರ್ ನಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಸಿಂಗ್, ತನಗೆ ಪೈಲಟ್ ಮಾಡಿದ 'ಆಫರ್' ಕುರಿತಂತೆ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ  ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.

"ಸಚಿನ್ ಪೈಲಟ್ ಮಾಡುತ್ತಿರುವುದು ಸರಿಯಲ್ಲ. ಹಣಕ್ಕಾಗಿ ನಾನು ಹಾಗೆ ಮಾಡುವುದಿಲ್ಲ,'' ಎಂದು ಮಾಲಿಂಗ ಹೇಳಿದರು.

"ಟಿಕೆಟ್ ಪಡೆಯಲು ಹಣ ನೀಡಬೇಕಾದ ಬಹುಜನ್ ಸಮಾಜ ಪಕ್ಷವನ್ನು ನಾನು 2008ರಲ್ಲಿ ತೊರೆದಿದ್ದಾಗಿ ನಾನು ಹೇಳಿದೆ. ಹಣ ಒಂದು ವಿಚಾರವೇ ಅಲ್ಲ, ನಿಮಗೇನು ಬೇಕು ಕೇಳಿ ನಿಮಗೆ ಅದು ದೊರೆಯುತ್ತದೆ... ರೂ. 35 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚು ಎಂದು ಅವರು ಹೇಳಿದರು, ಆದರೆ ಅದು ತಪ್ಪು ಎಂದು ನಾನು ಹೇಳಿದೆ,'' ಎಂದು ಮಾಲಿಂಗ ಹೇಳಿದರು.

ತಾನು ಇತ್ತೀಚಿಗಿನ ಸಮಯದಲ್ಲಿ ಪೈಲಟ್ ಜತೆ ಎರಡು ಮೂರು ಬಾರಿ ಮಾತನಾಡಿದ್ದಾಗಿ ಹೇಳಿದ ಅವರು, ಮೊದಲು ಡಿಸೆಂಬರ್ ನಲ್ಲಿ ಪಂಚಾಯತ್ ಮರುವಿಂಗಡೀಕರಣದ ವೇಳೆ ಹಾಗೂ ನಂತರ ಕಳೆದ ತಿಂಗಳು ರಾಜ್ಯಸಭಾ ಚುನಾವಣೆಗೆ ಮೊದಲು ಎಂದು ಅವರು ಹೇಳಿದರು.

ಬಿಜೆಪಿ ತನ್ನನ್ನು ಸಂಪರ್ಕಿಸಿಲ್ಲ ಹಾಗೂ ತಾನೂ ಬಿಜೆಪಿಯ ಯಾರ ಜತೆಗೂ ಮಾತನಾಡಿಲ್ಲ ಎಂದು ಹೇಳಿದ ಅವರು "ನನಗೆ ಪೈಲಟ್ ಕುರಿತು ಯಾವುದೇ ದ್ವೇಷವಿಲ್ಲ, ಆದರೆ ನಾನು ಸತ್ಯವನ್ನು ಹೇಳುತ್ತಿದ್ದೇನೆ,'' ಎಂದು ಸ್ಪಷ್ಟಪಡಿಸಿದರು.

ಈ ಆರೋಪ ಕುರಿತಂತೆ ಸಚಿನ್ ಪೈಲಟ್ ಇನ್ನೂ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News