ಬೆಳ್ತಂಗಡಿ: ಜಾನುವಾರು ಸಹಿತ ಪಿಕಪ್ ವಶ; ಚಾಲಕ ಪರಾರಿ

Update: 2020-07-20 18:34 GMT

ಬೆಳ್ತಂಗಡಿ, ಜು.20: ನಡ ಗ್ರಾಮದ ಕೇಲ್ತಾಜೆ ಸಮೀಪ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬೆಳ್ತಂಗಡಿ ಪೋಲಿಸರು ಸೋಮವಾರ ಬೆಳಗ್ಗೆ ಪತ್ತೆಹಚ್ಚಿದ್ದು ಐದು ಜಾನುವಾರುಗಳನ್ನು ಹಾಗೂ ಪಿಕಪ್‌ನ್ನು ವಶಪಡಿಸಿಕೊಂಡಿದ್ದಾರೆ.

ಕೇಲ್ತಾಜೆ ಸಮೀಪ ವೇಗವಾಗಿ ಬರುತ್ತಿದ್ದ ಪಿಕಪ್‌ನ್ನು ಪೊಲೀಸರು ತಡೆದಾಗ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದರು. ಪೊಲೀಸರು ಬೆನ್ನಟ್ಟಿದಾಗ ಚಾಲಕ ಲಾಯಿಲ ಮಸೀದಿಯ ಸಮೀಪ ಪಿಕಪ್‌ನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ.

ಪಿಕಪ್ ವಾಹನ ಹಾಗೂ ಅದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಐದು ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಜಾನುವಾರು ಸಾಗಾಟದ ಪಿಕಪ್ ಬೆನ್ನಟ್ಟಿದ್ದ ಬಜರಂಗದಳ ಕಾರ್ಯಕರ್ತರಿಗೆ ಹಲ್ಲೆ: ದೂರು
ದನ ಸಾಗಾಟಕ್ಕೆ ಸಂಬಂಧಿಸಿದಂತೆ ಪಿಕಪ್‌ನ್ನು ಬೆನ್ನಟ್ಟಿದ ಬಜರಂಗದಳದ ಕಾರ್ಯಕರ್ತರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಸೋಮವಾರ ಬೆಳಗ್ಗಿನ ಜಾವ ಬೆಳ್ತಂಗಡಿ ಸಮೀಪ ನಡೆದಿದೆ.

ಗುರುಪ್ರಸಾದ್(22) ಹಾಗೂ ನಿತೇಶ್ ಹಲ್ಲೆಗೊಳಗಾದವರು. ಇವರು ಜಾನುವಾರು ಸಾಗಾಟವನ್ನು ನೋಡಿ ಪಿಕಪ್‌ನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಪಿಕಪ್ ತಪ್ಪಿಸಿಕೊಂಡು ಹೋಗಿದ್ದು, ಅವರು ಹಿಂತಿರುಗಿ ಬರುತ್ತಿದ್ದ ಸಂದರ್ಭ ಕಾರಿನಲ್ಲಿ ಬಂದ ತಂಡವೊಂದು ಇವರನ್ನು ತಡೆದು ಹಲ್ಲೆ ನಡೆಸಿ ಅವರಲ್ಲಿದ್ದ ಹಣ ಹಾಗೂ ಚಿನ್ನವನ್ನು ಅಹರಿಸಿರುವುದಾಗಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News