ಅಕ್ರಮ, ಅಮಾನವೀಯ... ವರವರ ರಾವ್ ಆರೋಗ್ಯಸ್ಥಿತಿ ಕುರಿತ ಮಾಹಿತಿ ಮುಚ್ಚಿಟ್ಟ ಸರಕಾರಿ ಕ್ರಮಕ್ಕೆ ಕುಟುಂಬಸ್ಥರ ಆಕ್ರೋಶ

Update: 2020-07-21 04:13 GMT

ಹೈದರಾಬಾದ್, ಜು.21: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ 2018ರಿಂದಲೂ ಜೈಲಿನಲ್ಲಿರುವ ಕ್ರಾಂತಿಕಾರಿ ಕವಿ ವರವರ ರಾವ್ ಅವರ ಆರೋಗ್ಯಸ್ಥಿತಿ ಕುರಿತ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ ಸರಕಾರದ ಕ್ರಮ ಅಕ್ರಮ ಹಾಗೂ ಅಮಾನವೀಯ ಎಂದು ರಾವ್ ಕುಟುಂಬ ಆಪಾದಿಸಿದೆ.

ತಲೆಗೆ ಆಗಿರುವ ಏಟಿನ ಕಾರಣದಿಂದ ಜೈಲಿನಿಂದ ಮುಂಬೈನ ನಾನಾವತಿ ಆಸ್ಪತ್ರೆಗೆ, ಅದಕ್ಕೂ ಮುನ್ನ ಜೆಜೆ ಆಸ್ಪತ್ರೆಗೆ ಮತ್ತು ಸಂತ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂಬ ಅಂಶ ಮಾಧ್ಯಮಗಳ ಮೂಲಕವಷ್ಟೇ ತಿಳಿದುಬಂದಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ನವಿಮುಂಬೈ ತಲೋಜಾ ಜೈಲ್‌ನಲ್ಲಿರುವ ರಾವ್ ಅವರಿಗೆ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಇರುವುದು ಈ ವಾರ ತಿಳಿದುಬಂದಿತ್ತು.

''ಅವರ ಆರೋಗ್ಯಸ್ಥಿತಿ ಬಗ್ಗೆ ಕುಟುಂಬಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಯ ಆರೋಗ್ಯಸ್ಥಿತಿ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡದಿರುವುದು, ಕಾನೂನುಬಾಹಿರ, ಸಂವಿಧಾನ ವಿರೋಧಿ ಮತ್ತು ಅಮಾನವೀಯ'' ಎಂದು ಅವರ ಪತ್ನಿ ಹೇಮಲತಾ ಮತ್ತು ಪುತ್ರಿಯರು ಜಂಟಿ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಇತರ ಎಲ್ಲ ಮಾಹಿತಿಗಳೂ ಬೇರೆಯವರ ಮೂಲಕವಷ್ಟೇ ತಿಳಿಯುತ್ತಿವೆ. ತಲೆಗೆ ಏಟಾದ ಸುದ್ದಿ ಮಾಧ್ಯಮ ಹಾಗೂ ಸ್ನೇಹಿತರ ಮೂಲಕ ತಿಳಿದುಬಂದಿದೆ ಎಂಧು ಅವರು ಹೇಳಿದ್ದಾರೆ.

ಅಧಿಕೃತ ಮತ್ತು ಪಾರದರ್ಶಕ ಮಾಹಿತಿಯ ಕೊರತೆ ಹಿನ್ನೆಲೆಯಲ್ಲಿ ವದಂತಿ, ಊಹಾಪೋಹ ಹಾಗೂ ಅರೆಸತ್ಯ ಸುದ್ದಿಗಳು ಹರಡುತ್ತಿವೆ. ಇದು ಕುಟುಂಬ ಮತ್ತು ಸ್ನೇಹಿತರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಅವರ ತಲೆಗೆ ಗಾಯವಾಗಿರುವುದು ಜೆಜೆ ಆಸ್ಪತ್ರೆಯಲ್ಲೇ, ಸಂತ ಜಾರ್ಜ್ ಆಸ್ಪತ್ರೆಯಲ್ಲೇ ಅಥವಾ ನಾನಾವತಿ ಆಸ್ಪತ್ರೆಯಲ್ಲೇ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಅವರ ಸುರಕ್ಷೆ ಮತ್ತು ಕ್ಷೇಮದ ಬಗ್ಗೆ ಆತಂಕದಿಂದಿದ್ದೇವೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News