×
Ad

ಪಂಜಾಬಿ, ಜಾಟರು ಹೆಚ್ಚು ಬುದ್ದಿವಂತರಲ್ಲ, ಅವರನ್ನು ಬಂಗಾಳಿಗಳಿಗೆ ಹೋಲಿಸಲು ಸಾಧ್ಯವಿಲ್ಲ ಎಂದ ತ್ರಿಪುರಾ ಮುಖ್ಯಮಂತ್ರಿ

Update: 2020-07-21 11:55 IST

ಹೊಸದಿಲ್ಲಿ,ಜು.21: ಪಂಜಾಬಿಗಳು ಹಾಗೂ ಹರ್ಯಾಣದ ಜಾಟರು ದೈಹಿಕವಾಗಿ ಬಲಿಷರಾಗಿದ್ದರೂ ಬಂಗಾಳಿಗಳಷ್ಟು ಬುದ್ದಿವಂತರಲ್ಲ ಎಂದಿರುವ ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ್ ದೇಬ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತನ್ನ ಮಾತು ವಿವಾದದ ಸ್ವರೂಪ ಪಡೆಯುತ್ತಲೇ ಎಚ್ಚೆತ್ತುಕೊಂಡ ದೇಬ್ ಕ್ಷಮೆಯಾಚಿಸಿದರು.
ರವಿವಾರ ಅಗರ್ತಲದ ಪತ್ರಿಕಾಭವನದಲ್ಲಿ ಮಾತನಾಡುತ್ತಿದ್ದ ದೇಬ್, "ಭಾರತದ ಪ್ರತಿಯೊಂದು ಸಮುದಾಯ ನಿರ್ದಿಷ್ಟ ಗುಣಸ್ವಭಾವದಿಂದ  ಪ್ರಸಿದ್ಧರಾಗಿದ್ದಾರೆ. ಬುದ್ದಿವಂತಿಕೆಯ ವಿಚಾರದಲ್ಲಿ ಬಂಗಾಳಿಗಳಿಗೆ ಸವಾಲು ಒಡ್ಡಲು ಸಾಧ್ಯವಿಲ್ಲ. ಬುದ್ದಿವಂತಿಕೆಯು ಅವರ ಗುರುತು. ಪಂಜಾಬ್‍ನಲ್ಲಿ ಸಿಖ್ಖರು  ಹಾಗೂ ಹರ್ಯಾಣದಲ್ಲಿ ಜಾಟರು ಜಾಸ್ತಿ ಇದ್ದಾರೆ. ಇವರು ಹೆಚ್ಚು ಬುದ್ದಿವಂತರಲ್ಲ. ಆದರೆ ಪಂಜಾಬಿಗಳು ಶಕ್ತಿಶಾಲಿಗಳು, ಧೈರ್ಯವಂತರು ಹಾಗೂ ಜಾಟರು ಆರೋಗ್ಯವಂತರಾಗಿರುತ್ತಾರೆ.  ಅವರನ್ನು ಬಂಗಾಳಿಗಳ ಬುದ್ದಿವಂತಿಕೆಗೆ  ಹೋಲಿಸಲು ಸಾಧ್ಯವಿಲ್ಲ. ಬುದ್ಧಿವಂತಿಕೆಯ ಮೂಲಕ ಇಡೀ ಭಾರತದಲ್ಲಿ ಬಂಗಾಳಿಗಳು ಪ್ರಸಿದ್ದರಾಗಿದ್ದಾರೆ'' ಎಂದು ದೇಬ್ ಹೇಳಿದ್ದರು.
ಮುಖ್ಯಮಂತ್ರಿ ದೇವ್ ಅವರ 50 ಸೆಕೆಂಡ್‍ಗಳ ವೀಡಿಯೊವನ್ನು ಅನ್‍ಲೈನ್‍ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಈ ಹೇಳಿಕೆಯು ಬಿಜೆಪಿ ಮನಸ್ಥಿತಿಯ ಸೂಚಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಅವಮಾನಕಾರಿ ಹಾಗೂ ದುರದೃಷ್ಟಕರ. ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಪಂಜಾಬ್‍ನ ಸಿಖ್ ಸಹೋದರರು ಹಾಗೂ ಹರ್ಯಾಣದ  ಜಾಟ್ ಸಮುದಾಯವನ್ನು ಅವಮಾನಿಸಿದ್ದಾರೆ. ಅವರಿಗೆ ಬುದ್ದಿ ಕಡಿಮೆಯಿದೆ'' ಎಂದು ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.
"ಇದು ಬಿಜೆಪಿಯ ನಿಜವಾದ ಮನಸ್ಥಿತಿ. ಮನೋಹರ್ ಖಟ್ಟರ್‍ಜೀ ಹಾಗೂ ದುಷ್ಯಂತ್ ಚೌಟಾಲ ಏಕೆ ಮೌನ ತಾಳಿದ್ದಾರೆ ಎಂದು ಹರ್ಯಾಣ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯನ್ನು ಸುರ್ಜೆವಾಲಾ ಪ್ರಶ್ನಿಸಿದರು.
ಪ್ರಧಾನಿ ಮೋದಿಜಿ ಹಾಗೂ ನಡ್ಡಾಜಿ(ಬಿಜೆಪಿ ಅಧ್ಯಕ್ಷ) ಎಲ್ಲಿದ್ದಾರೆ?ಇವರು ಕ್ಷಮೆಯಾಚಿಸಿ, ದೇಬ್ ವಿರುದ್ಧ ಕ್ರಮಕೈಗೊಳ್ಳಬೇಕೆಂದರು.

ದೇಬ್ ಕ್ಷಮೆಯಾಚನೆ

ತ್ರಿಪುರಾ ಸಿಎಂ ದೇಬ್ ತನ್ನ ಆಘಾತಕಾರಿ ಹೇಳಿಕೆಗೆ  ಪಂಜಾಬಿ ಹಾಗೂ ಜಾಟ್ ಸಮುದಾಯವನ್ನು ಟ್ವೀಟ್‍ ಮೂಲಕ ಕ್ಷಮೆಯಾಚಿಸಿದರು.
"ನನ್ನ ಮಿತ್ರರೆಲ್ಲರೂ ಈ ಎರಡು ಸಮುದಾಯಕ್ಕೆ ಸೇರಿದವರು. ಒಂದು ವೇಳೆ ನನ್ನಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಈ ಕುರಿತು ನಾನು ಕ್ಷಮೆಕೋರುತ್ತೇನೆ'' ಎಂದು ಸರಣಿ ಟ್ವೀಟ್‍ನಲ್ಲಿ ದೇಬ್ ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News