ಉತ್ತರ ಪ್ರದೇಶ: ಪುತ್ರಿಯರ ಎದುರೇ ಪತ್ರಕರ್ತನಿಗೆ ಗುಂಡಿಕ್ಕಿದ ದುಷ್ಕರ್ಮಿಗಳು

Update: 2020-07-21 12:37 GMT

ಗಾಝಿಯಾಬಾದ್:  ಉತ್ತರ ಪ್ರದೇಶದ ಗಾಝಿಯಾಬಾದ್‍ನಲ್ಲಿ ಸೋಮವಾರ ರಾತ್ರಿ ಪತ್ರಕರ್ತರೊಬ್ಬರನ್ನು ದುಷ್ಕರ್ಮಿಗಳು ಅವರ ಇಬ್ಬರು ಪುತ್ರಿಯರ ಎದುರೇ ಗುಂಡಿಕ್ಕಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪತ್ರಕರ್ತ ವಿಕ್ರಮ್ ಜೋಷಿ ತಮ್ಮ ಇಬ್ಬರು ಪುತ್ರಿಯರೊಂದಿಗೆ ತಮ್ಮ ಮೋಟಾರ್ ಸೈಕಲ್‍ನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳ ಗುಂಪೊಂದು ಅವರನ್ನು ಅಡ್ಡಗಟ್ಟಿ ಅವರತ್ತ ಗುಂಡು ಹಾರಿಸಿತ್ತು.  ಜೋಷಿ ಅವರ ತಲೆಗೆ ಗುಂಡೇಟು ತಗಲಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ಥಿತಿ ಗಂಭೀರವಾಗಿದೆ. ಜೋಷಿ ಅವರತ್ತ ಗುಂಡು ಹಾರಿಸಿದ್ದ ವ್ಯಕ್ತಿ ಸಹಿತ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಅವರೆಲ್ಲರೂ ಜೋಷಿ ಕುಟುಂಬದ ಪರಿಚಿತರೇ ಆಗಿದ್ದಾರೆಂದು ತಿಳಿದು ಬಂದಿದೆ.

ಘಟನೆ ಗಾಝಿಯಾಬಾದ್‍ನ ವಿಜಯನಗರ್ ಪ್ರದೇಶದಲ್ಲಿ ನಡೆದಿದೆ. ಜೋಷಿ ಅವರಿದ್ದ ಬೈಕ್ ಪಕ್ಕನೆ ತಿರುಗಿದ್ದು ಹಾಗೂ ಅದು ನೆಲಕ್ಕೆ ಬೀಳುತ್ತಲೇ ಅವರ ಇಬ್ಬರು ಹೆಣ್ಣು ಮಕ್ಕಳು ಓಡುತ್ತಿರುವುದು ಹಾಗೂ ದುಷ್ಕರ್ಮಿಗಳು ಜೋಷಿ ಅವರಿಗೆ ಹಲ್ಲೆಗೈಯ್ಯುತ್ತಿರುವುದು ಕಾಣಿಸುತ್ತದೆ. ಅವರಿಗೆ ಗುಂಡಿಕ್ಕುವ ದೃಶ್ಯಗಳು ಅಸ್ಪಷ್ಟವಾಗಿದ್ದರೂ ಅವರನ್ನು ಕಾರೊಂದರತ್ತ ಎಳೆದು ತರುತ್ತಿರುವುದು ಹಾಗೂ ಅಲ್ಲಿಂದ ಪರಾರಿಯಾಗುವ ಮುಂಚೆ ಅವರಿಗೆ ಮತ್ತೆ ಹಲ್ಲೆಗೈಯ್ಯುತ್ತಿರುವುದು ಕಾಣಿಸುತ್ತದೆ.

ನಂತರ ಅವರ ಇಬ್ಬರು ಪುತ್ರಿಯರೂ ಸ್ಥಳಕ್ಕೆ ಧಾವಿಸಿ ಅಳುತ್ತಾ ದಾರಿಯಲ್ಲಿ ಸಾಗುವವರಿಂದ ಸಹಾಯ ಯಾಚುತ್ತಿರುವುದು ಹಾಗೂ ಕೊನೆಗೆ ಕೆಲ ಜನರು ಗಂಭೀರವಾಗಿ ಗಾಯಗೊಂಡಿರುವ ಜೋಷಿ ಅವರತ್ತ ಧಾವಿಸುತ್ತಿರುವುದು ಕಾಣಿಸುತ್ತದೆ. ಸೋಮವಾರ ರಾತ್ರಿ ಸುಮಾರು 10.30ಕ್ಕೆ ಜೋಷಿ ತಮ್ಮ ಸೋದರಿಯ ಮನೆಯಿಂದ ವಾಪಸಾಗುತ್ತಿದ್ದಾಗ ಘಟನೆ ನಡೆದಿದೆ. ಕೆಲ ಮಂದಿ ಅವರ ಸೋದರಸೊಸೆಗೆ ನೀಡುತ್ತಿರುವ ಕಿರುಕುಳ ಕುರಿತಂತೆ ಅವರು ಇತ್ತೀಚೆಗೆ ಪೊಲೀಸ್ ದೂರು ನೀಡಿದ್ದರಿಂದ ಅವರ ಮೇಲೆ ಪ್ರತೀಕಾರದ ಕ್ರಮವಾಗಿ ಹಲ್ಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News