ನರ್ಸ್ ಗೆ ಕೊರೋನ ಪಾಸಿಟಿವ್: ಸಾಮಾಜಿಕ ಅಸಮಾನತೆ ವಿರುದ್ಧ ಜಿಲ್ಲಾಧಿಕಾರಿಗೆ ದೂರು

Update: 2020-07-21 18:32 GMT

ಮೂಡುಬಿದಿರೆ, ಜು.21: ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೋವಿಡ್ ರೋಗಿಗಳ ಆರೈಕೆ ಮಾಡುತ್ತಿದ್ದ ಮೂಡುಬಿದಿರೆ ಪ್ರದೇಶದ ಮಹಿಳೆಯೊಬ್ಬರಿಗೆ ಹಾಗೂ ಅವರ 7 ವರ್ಷ ಪ್ರಾಯದ ಪುತ್ರನಿಗೆ ಕೊರೋನ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಈ ನಡುವೆ ಕೆಲವು ಕಿಡಿಗೇಡಿಗಳು ಕುಟುಂಬದ ಬಗ್ಗೆ ಇಲ್ಲಸಲ್ಲದ ದೂರುಗಳನ್ನು ನೀಡುತ್ತಿದ್ದು, ಸಾಮಾಜಿಕ ಅಸಮಾನತೆಯನ್ನು ಪಾಲಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ.

ಕೊರೋನ ವಿರುದ್ಧದ ಹೋರಾಟದಲ್ಲಿ ಫ್ರಂಟ್‌ಲೈನ್ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಇವರಿಗೆ ಇದೀಗ ಪರಿಸರದ ಕೆಲವು ಕಿಡಿಗೇಡಿಗಳು ಸರಕಾರಿ ಅಧಿಕಾರಿಗಳಿಗೆ ದೂರುಗಳನ್ನು ನೀಡಿ ಮಾನಸಿಕ ಹಿಂಸೆ ನೀಡುತ್ತಿದ್ದು, ಇದರಿಂದ ಬೇಸತ್ತು ಸರಕಾರಿ ಸೇವೆಗೆ ರಾಜೀನಾಮೆ ನೀಡುವ ಕುರಿತು ಯೋಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಪಾಸಿಟಿವ್ ಹಿನ್ನೆಲೆಯಲ್ಲಿ ಸರಕಾರದ ಎಲ್ಲ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದು, ಆದರೂ ಕೆಲವು ಕಿಡಿಗೇಡಿಗಳು ಸುಳ್ಳು ಆರೋಪಗಳನ್ನು, ಅನಾಮಿಕ ದೂರುಗಳನ್ನು ನೀಡುವ ಮೂಲಕ ಬೆದರಿಸುತ್ತಿದ್ದಾರೆ. ಕರ್ತವ್ಯವನ್ನು ದೇವರೆಂದು ನಂಬಿ ಸೇವೆ ಸಲ್ಲಿಸಿದ್ದೇನೆ. ಪ್ರತಿಯಾಗಿ ಸಮಾಜದ ಕೆಲವು ದುಷ್ಕರ್ಮಿಗಳು ಈ ರೀತಿಯಾಗಿ ಹಿಂಸಿಸುತ್ತಿದ್ದಾರೆ. ಇದರಿಂದ ಮನನೊಂದಿದ್ದೇನೆ ಎಂದು ಮಹಿಳೆ ತಿಳಿಸಿದ್ದಾರೆ.

ಈ ಮಹಿಳೆಯ ಪತಿ ಹಾಗೂ 4 ವರ್ಷದ ಇನ್ನೊಂದು ಮಗುವಿಗೆ ನೆಗೆಟಿವ್ ವರದಿಯಾಗಿದ್ದು, ನಾಲ್ವರಲ್ಲೂ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News