ಉಡುಪಿ ಗಡಿಗಳ ಸೀಲ್‌ಡೌನ್ ತೆರವು: ಬೆರಳಣಿಕೆ ಬಸ್‌ಗಳ ಸಂಚಾರ

Update: 2020-07-22 13:16 GMT

ಉಡುಪಿ, ಜು.22: ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ಗಡಿಗಳಲ್ಲಿನ ಸೀಲ್‌ಡೌನ್ ತೆರವುಗೊಳಿಸಲಾಗಿದ್ದು, ಜಿಲ್ಲೆಯೊಳಗೆ ಕೆಲವೊಂದು ಖಾಸಗಿ ಹಾಗೂ ಸರಕಾರಿ ಬಸ್ಗಳು ಇಂದಿನಿಂದ ಸಂಚಾರ ಆರಂಭಿಸಿವೆ.

ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕುಂದಾಪುರಕ್ಕೆ ಎರಡು, ಹೆಬ್ರಿ, ಕಾರ್ಕಳ ಹಾಗೂ ಹೆಜಮಾಡಿಗೆ ತಲಾ ಒಂದು ಸೇರಿದಂತೆ ಒಟ್ಟು ಐದು ಸರಕಾರಿ ಬಸ್‌ಗಳು ಸಂಚರಿಸಿವೆ. ಕುಂದಾಪುರದಿಂದ ಉಡುಪಿ, ಮಣಿಪಾಲ ಮತ್ತು ಬೈಂದೂರು ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಟ ನಡೆಸಿವೆ. ಹೊರ ಜಿಲ್ಲೆಗಳಿಗೆ ಯಾವುದೇ ಬಸ್ ಸಂಚಾರ ನಡೆಸಿಲ್ಲ. ನಾಳೆ ಯಿಂದ ಬೆಂಗಳೂರು ಬಸ್ ಸಂಚಾರ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ಸಿಟಿಬಸ್ ಓಡಾಟ
ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಕುಂದಾಪುರ, ಕಾರ್ಕಳ, ಹೆಬ್ರಿ ಮಾರ್ಗವಾಗಿ ಬೆರಳೆಣಿಕೆಯ ಖಾಸಗಿ ಬಸ್ಸುಗಳು ಸಂಚಾರ ಆರಂಭಿಸಿವೆ. ಅದೇ ರೀತಿ ಕುಂದಾಪುರದಲ್ಲೂ ಕೆಲವೇ ಕೆಲವು ಬಸ್‌ಗಳು ಮಾತ್ರ ರಸ್ತೆಗೆ ಇಳಿದಿವೆ.

ಉಡುಪಿಯಿಂದ ಹೆಜಮಾಡಿವರೆಗೆ ಒಂದು ಖಾಸಗಿ ಸರ್ವಿಸ್ ಬಸ್ ಓಡಿದೆ. ಬೆಳಗ್ಗೆಯಿಂದ ಯಾವುದೇ ಸಿಟಿ ಬಸ್‌ಗಳು ನಿಲ್ದಾಣಕ್ಕೆ ಬಂದಿರಲಿಲ್ಲ. ಸುಮಾರು 11ಗಂಟೆಯ ಬಳಿಕ ಒಂದು ಬಸ್ ಮಾತ್ರ ಮಣಿಪಾಲ ಮಾರ್ಗ ವಾಗಿ ಸಂಚಾರ ನಡೆಸಿರುವುದು ತಿಳಿದುಬಂದಿದೆ. ಉಳಿದಂತೆ ಮಲ್ಪೆ, ಹೂಡೆ, ಅಲೆವೂರು, ಉದ್ಯಾವರ ಭಾಗಕ್ಕೆ ಯಾವುದೇ ಸಿಟಿ ಬಸ್‌ಗಳು ಸಂಚರಿಸಿಲ್ಲ.

ಮಂಗಳೂರು ಲಾಕ್‌ಡೌನ್ ಆಗಿರುವುದರಿಂದ ಉಡುಪಿ-ಮಂಗಳೂರು ಎಕ್ಸ್‌ಪ್ರೆಸ್ ಬಸ್‌ಗಳು ಇಂದು ರಸ್ತೆಗೆ ಇಳಿಯಲಿಲ್ಲ. ಇಂದು ಇಡೀ ದಿನ ಖಾಸಗಿ ಹಾಗೂ ಸರಕಾರಿ ಬಸ್‌ಗಳು ಪ್ರಯಾಣಿಕರಿಲ್ಲದೆ ನಷ್ಟದಲ್ಲಿ ಓಡಾಟ ನಡೆಸಿದೆ. ಕೆಲವು ಬಸ್‌ಗಳು ಬೆರಳಣಿಕೆಯ ಪ್ರಯಾಣಿಕರೊಂದಿಗೆ ಸಂಚರಿಸುತ್ತಿರುವುದು ಕಂಡು ಬಂತು.

ನರ್ಮ್ ಬಸ್ ಸಂಚಾರ ಇಲ್ಲ
ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಅನುಕೂಲವಾಗುವಂತೆ ಉಡುಪಿಯಿಂದ ಮಣಿಪಾಲ ಮಾರ್ಗದಲ್ಲಿ ಒಂದು ನರ್ಮ್ ಬಸ್ ಮಾತ್ರ ಇಂದು ಸಂಚರಿಸಿತು.
ಪ್ರಯಾಣಿಕರ ಕೊರತೆಯಿಂದ ನರ್ಮ್ ಬಸ್‌ಗಳು ನಷ್ಟದಲ್ಲಿ ಸಂಚರಿಸುತ್ತಿರುವುದರಿಂದ ಉಳಿದ ಮಾರ್ಗಕ್ಕೆ ಸದ್ಯ ಯಾವುದೇ ನರ್ಮ್ ಬಸ್‌ಗಳನ್ನು ಓಡಿಸಲ್ಲ ಎಂದು ಉಡುಪಿ ಡಿಪೋ ವ್ಯವಸ್ಥಾಪಕ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News