ದ.ಕ.: ಲಾಕ್‌ಡೌನ್ ಇಂದು ಅಂತ್ಯ

Update: 2020-07-22 07:24 GMT

ಮಂಗಳೂರು, ಜು.22: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಒಂದು ವಾರದ ಲಾಕ್‌ಡೌನ್ ಇಂದು (ಜು.22)ರಾತ್ರಿಗೆ ಕೊನೆಗೊಳ್ಳಲಿದೆ.

ಇಂದು ಬೆಳಗ್ಗೆ ಲಾಕ್‌ಡೌನ್ ವಿನಾಯಿತಿ ಅವಧಿ 11 ಗಂಟೆಯವರೆಗೆ ನಗರದಲ್ಲಿ ವಾಹನ ಸಂಚಾರ ನಿರಾತಂಕವಾಗಿದ್ದು, ಬಳಿಕ ತೆರೆದಿದ್ದ ತರಕಾರಿ, ಹಣ್ಣುಹಂಪಲು ಹಾಗೂ ದಿನಸಿ ಅಂಗಡಿಗಳು ಬಂದ್ ಆಗಿ ಮಧ್ಯಾಹ್ನದ ವೇಳೆಗೆ ನಗರ ಸಂಪೂರ್ಣ ಸ್ತಬ್ಧಗೊಂಡಿತು. ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಇಂದು ಕೂಡಾ ಲಾಕ್‌ಡೌನ್ ವಿನಾಯಿತಿ ಅವಧಿ ಬಳಿಕ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳನ್ನು ತಡೆದು ವಿಚಾರಿಸಿ ಕಳುಹಿಸಿದರು. ಬೆಳಗ್ಗಿನ ಹೊತ್ತು ದ್ವಿಚಕ್ರ, ಕಾರು ಸೇರಿದಂತೆ ಖಾಸಗಿ ವಾಹನಗಳ ಓಡಾಟ ನಗರದ ಪ್ರಮುಖ ರಸ್ತೆಗಳಲ್ಲಿ ಕಂಡು ಬಂದರೂ ಮಧ್ಯಾಹ್ನದ ವೇಳೆಗೆ ಬಹುತೇಕ ನಗರ ಬಿಕೋ ಅನ್ನುತ್ತಿದೆ.

ಕುಡುಕರೊಬ್ಬರ ಕಿರಿಕಿರಿ!

ಪುರಭವನದ ಎದುರಿನ (ಕ್ಲಾಕ್‌ಟವರ್ ಬಳಿ) ರಸ್ತೆಯಲ್ಲಿ ಪೊಲೀಸರ ಗಸ್ತು ಕೇಂದ್ರದ ಬಳಿ ಕುಡುಕರೊಬ್ಬರು ಕಿರಿಕ್ ಮಾಡಿದ ಪ್ರಸಂಗ ನಡೆಯಿತು. ಲಾಕ್‌ಡೌನ್ ವಿನಾಯಿತಿ ಅವಧಿ ಮುಗಿದ ಬಳಿಕ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್‌ಗಳನ್ನು ಅಡ್ಡವಿರಿಸಿ ವಾಹನಗಳನ್ನು ತಡೆಯುತ್ತಿದ್ದರು. ಈ ಸಂದರ್ಭ ಅಲ್ಲಿಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮದ್ಯಪಾನಿಯಾಗಿದ್ದ ವ್ಯಕ್ತಿಯೊಬ್ಬರು ಪೊಲೀಸರ ಕಾರ್ಯಾಚರಣೆಗೆ ಅಡ್ಡಿಪಡಿಸಿದರು.

ಪೊಲೀಸ್ ಸಿಬ್ಬಂದಿಯೆದುರೇ ವಾಹನಗಳಲ್ಲಿ ಸಂಚರಿಸುತ್ತಿದ್ದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಂದಕ್ಕೆ ಹೋಗುವಂತೆ ಬೊಬ್ಬಿಡುತ್ತಿದ್ದರು. ಅಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅವರನ್ನು ಅಲ್ಲಿಂದ ಕಳುಹಿಸುವ ಪ್ರಯತ್ನ ನಡೆಸಿದರೂ ಸಫಲವಾಗಲಿಲ್ಲ. ಬಳಿಕ ಅಲ್ಲಿಗೆ ಆಗಮಿಸಿದ ಪೊಲೀಸ್ ಅಧಿಕಾರಿಯೊಬ್ಬರು ಆ ವ್ಯಕ್ತಿಯನ್ನು ಗದರಿಸಿ ಅಲ್ಲಿಂದ ತೆರಳುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News