ಮಲ್ಪೆ: ನಾಡದೋಣಿ ಮೀನುಗಾರಿಕೆ ಅವಧಿ ವಿಸ್ತರಿಸಲು ಆಗ್ರಹಿಸಿ ಮನವಿ

Update: 2020-07-22 13:22 GMT

ಮಲ್ಪೆ, ಜು.22: ಮಳೆಗಾಲ ಋತುವಿನ ನಾಡದೋಣಿ ಮೀನುಗಾರಿಕೆಯ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ಮಲ್ಪೆಸಾಂಪ್ರಾದಾಯಿಕ ನಾಡದೋಣಿ ಸಂಘ, ನಾಡ ಟ್ರಾಲ್ ದೋಣಿ ಸಂಘ, ಸಾಂಪ್ರದಾಯಿಕ ಕಂತು ಬಲೆ ದೋಣಿ ಸಂಘಗಳು ಇತ್ತೀಚೆಗೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕೆ.ರಘುಪತಿ ಭಟ್ ಮನವಿ ಸಲ್ಲಿಸಿವೆ.

ಸುಮಾರು 35 ವರ್ಷಗಳಿಂದಲೂ ಮಳೆಗಾಲ ಋತುವಿನ ಮೀನುಗಾರಿಕೆಗೆ ಮೂರು ತಿಂಗಳ ಅವಧಿಯನ್ನು ನೀಡಲಾಗುತ್ತಿದ್ದು, ಕಳೆದ 3 ವರ್ಷಗಳಿಂದ ಅದನ್ನು 2 ತಿಂಗಳಿಗೆ ಕಡಿತಗೊಳಿಸಲಾಗಿದೆ. ಮಳೆಗಾಳಿ, ಪ್ರಾಕೃತಿಕ ವೈಪರೀತ್ಯಗಳು ಸಂಭವಿಸುವುದರಿಂದ ಈ ಎರಡು ತಿಂಗಳ ಅವಧಿಯಲ್ಲಿ ಮೀನುಗಾರಿಕೆ ನಡೆಸಲು ಹೆಚ್ಚು ದಿನ ಸಿಗುತ್ತಿಲ್ಲ. ಈ ಋತುವಿನಲ್ಲಿ ಈವರೆಗೆ ಯಾವುದೇ ರೀತಿಯ ಮೀನುಗಾರಿಕೆಯಲ್ಲಿ ಸಂಪಾದನೆ ಆಗಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.

ಈ ಮೂರು ಸಂಘದ ಅಡಿಯಲ್ಲಿ ಸುಮಾರು 5 ಸಾವಿರ ಮೀನುಗಾರರಿದ್ದು, ಇದೀಗ ಇವರ ಕುಟುಂಬದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಆದ್ದರಿಂದ ಈ ಮಳೆಗಾಲದ ಋತುವಿನಲ್ಲಿ ನಾಡದೋಣಿ ಮೀನುಗಾರಿಕೆಗೆ ಹಿಂದಿನಂತೆ ಆ.30ರವರೆಗೆ ಅವಧಿಯನ್ನು ವಿಸ್ತರಿಸಬೇಕು ಮತ್ತು ಯಾಂತ್ರಿಕ ಮೀನುಗಾರಿಕೆಗೆ ಸೆ.1ರಿಂದ ಅವಕಾಶವನ್ನು ನೀಡೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ನಾಡದೋಣಿ ಅಧ್ಯಕ್ಷ ಜನಾರ್ದನ ತಿಂಗಳಾಯ, ಟ್ರಾಲ್ ದೋಣಿ ಅಧ್ಯಕ್ಷ ದೇವದಾಸ್ ಕುಂದರ್, ಉಪಾಧ್ಯಕ್ಷ ಮಧುಸೂದನ್ ಮೈಂದನ್, ಕಾರ್ಯದರ್ಶಿ ಪುರಂದರ್ ಕೋಟ್ಯಾನ್, ಕೋಶಾಧಿಕಾರಿ ಆನಂದ ಕಾಂಚನ್, ಕಂತುಬಲೆ ದೋಣಿ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಸದಸ್ಯರಾದ ಗಣಪ ಕೋಡಿ, ಕರುಣಾಕರ್ ಮೆಂಡನ್, ವಿನೋದ್ ಕುಂದರ್, ತಾರಾನಾಥ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News