ಕೊರೋನ ಸೀಲ್‌ಡೌನ್‌ನಿಂದ ಅಸಹಾಯಕರಾದ ಬೆಳಪುವಿನ ದಲಿತ ಕುಟುಂಬಗಳು

Update: 2020-07-22 14:56 GMT

ಕಾಪು, ಜು.22: ಕೊವೀಡ್-19 ಸಂಬಂಧ ಸೀಲ್‌ಡೌನ್ ಆಗಿರುವ ಬೆಳಪು ಗ್ರಾಮದ ಪಣಿಯೂರು ಅಂಬೇಡ್ಕರ್ ರಸ್ತೆಯಲ್ಲಿರುವ ದಲಿತ ಕಾಲೋನಿಯತ್ತ ಯಾರು ಸುಳಿದಾಡದ ಪರಿಣಾಮ ಇಲ್ಲಿನ ದಲಿತ ಕುಟುಂಬಗಳು, ಕುಡಿಯುವ ನೀರು, ಆಹಾರ ಸಾಮಾಗ್ರಿಗಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಕುಟುಂಬದ ಕೆಲವರಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಿಯಮದ ಪ್ರಕಾರ ಈ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿತ್ತು. ಅದರ ನಂತರ ಸ್ಥಳೀಯರು ಕೊರೋನ ಸೋಂಕಿತರಿದ್ದಾರೆಂಬ ಕಾರಣಕ್ಕೆ ಕಾಲೋನಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಓಡಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಈ ಕುಟುಂಬಗಳ ನೆರವಿಗೆ ಬರಲು ಜನ ಬಾರದಿರುವುದರಿಂದ ಇಲ್ಲಿನ ದಲಿತರು ದಿನನಿತ್ಯದ ಆಹಾರ ಸಾಮಾಗ್ರಿಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

'ಈ ಕಾಲೊನಿಯಲ್ಲಿ ವಾಸವಾಗಿರುವ ಹಲವು ಮಂದಿ ಗದ್ದೆ ಕೆಲಸಕ್ಕೆ ಹೋಗುತ್ತಿದ್ದು, ಇದೀಗ ಕೊರೋನ ಬಂದ ನಂತರ, ಇಲ್ಲಿನ ಯಾರು ಕೂಡ ಗದ್ದೆ ಕೆಲಸಕ್ಕೆ ಬಾರದಂತೆ ತಾಕೀತು ಮಾಡಲಾಗುತ್ತಿದೆ. ಕಾಲೋನಿಯವರು ಗದ್ದೆಗಿಳಿದರೆ ಬೇರೆಯವರು ಗದ್ದೆ ಕೆಲಸ ಮಾಡುವುದಿಲ್ಲವೆಂದು ಬೆದರಿಸಲಾಗುತ್ತಿದೆ. ಇದರಿಂದ ನಾವು ಕೂಲಿಗಾಗಿ ಪರದಾಡುವಂತಾಗಿದೆ' ಎಂದು ಸ್ಥಳೀಯ ನಿವಾಸಿ ಲಕ್ಷ್ಮಣ ಮೇಸ್ತ್ರಿ ಅಳಲು ತೋಡಿಕೊಂಡಿದ್ದಾರೆ.

'ನನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಿ ಮನೆಯಿಂದ ಆಂಬುಲೆನ್ಸ್‌ನಲ್ಲಿ ಕಾರ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದರು. ಮರುದಿನ ನೆಗೆಟಿವ್ ವರದಿ ಬಂದಿದೆ ಎಂದು ಹೇಳಿ ಬಸ್ಸಿನಲ್ಲಿ ಮನೆಗೆ ಹೋಗುವಂತೆ ವೈದ್ಯರು ತಿಳಿಸಿದರು. ಆದರೂ ನಮ್ಮನ್ನು ನೋಡಿ ಜನ ಭಯ ಪಡುತ್ತಾರೆ. ಇದು ಸಾಕಷ್ಟು ನೋವಾಗುತ್ತದೆ. ನಮ್ಮ ಕಷ್ಟಗಳಿಗೆ ಸ್ಪಂದಿಸಲು ಯಾರು ಕೂಡ ಬರುತ್ತಿಲ್ಲ' ಎಂದು ಸುಧಾಕರ್ ಕುಡ್ಡು ಮುಖಾರಿ ನೋವು ಹೇಳಿಕೊಂಡಿದ್ದಾರೆ.

'ನಮ್ಮ ಸಹಾಯಕ್ಕೆ ಯಾರು ಬರುತ್ತಿರಲಿಲ್ಲ. ಕಾಲೋನಿಯತ್ತ ಯಾರು ಕೂಡ ಸುಳಿಯುತ್ತಿರಲಿಲ್ಲ. ಇದರಿಂದ ನಮಗೆ ಆಹಾರದ ಕೊರತೆ ಉಂಟಾಗಿತ್ತು. ಹೀಗಾದರೆ ನಾವು ಬದುಕುವುದಾದರೂ ಹೇಗೆ. ಯಾವ ಅಧಿಕಾರಿಗಳೂ ನಮ್ಮ ಸಹಾಯಕ್ಕೆ ಬಂದಿಲ್ಲ' ಎಂದು ಸ್ಥಳೀಯರಾದ ಶಶಿ ಸುಂದರ ಆರೋಪಿಸಿದ್ದಾರೆ.

ದೇವಿಪ್ರಸಾದ್ ಶೆಟ್ಟಿ ನೆರವು: ಈ ವಿಚಾರ ತಿಳಿದು ದಲಿತರ ಕಾಲೊನಿಗೆ ಭೇಟಿ ನೀಡಿದ ಬೆಳಪು ಗ್ರಾಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸೀಲ್ ಡೌನ್ ಪ್ರದೇಶದ ಜನರಿಗೆ ದಿನ ನಿತ್ಯದ ಆಹಾರ ಸಾಮಾಗ್ರಿಗಳನ್ನು ಮತ್ತು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.

ದಲಿತರ ಮನೆಗಳಿಗೆ ಭೇಟಿ ನೀಡಿದ ಅವರು, ಕುಟುಂಬದವರಿಗೆ ಮಾನಸಿಕವಾಗಿ ಧೈರ್ಯ ತುಂಬಿ, ತಕ್ಷಣಕ್ಕೆ ಬೇಕಾಗುವ ಆಹಾರ ಸಾಮಾಗ್ರಿಗಳ ವ್ಯವಸ್ಥೆಗೊಳಿಸಿದರು. ಅದೇ ರೀತಿ ಕುಡಿಯುವ ನೀರಿಗೂ ಅವಕಾಶ ಕಲ್ಪಿಸಿದರು. ಯಾರಾದರು ಕೂಲಿಗಾಗಿ ನಿರ್ಬಂಧ ಹೇರಿದರೆ ಪೊಲೀಸರಿಗೆ ದೂರು ನೀಡುವುದಾಗಿ ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News