ದ.ಕ. ಜಿಲ್ಲೆಯಲ್ಲಿ ಬುಧವಾರ 162 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 3,996ಕ್ಕೆ ಏರಿಕೆ

Update: 2020-07-22 15:05 GMT

ಮಂಗಳೂರು, ಜು.22: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆ 3,000ದ ಗಡಿ ದಾಟಿದ ಐದೇ ದಿನದಲ್ಲಿ 4,000ದ ಗಡಿಯಂಚಿಗೆ ಬಂದು ತಲುಪಿದೆ. ವೇಗವಾಗಿ ಪ್ರಕರಣಗಳು ಹೆಚ್ಚುತ್ತಿರುವುದು ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಅಬ್ಬರ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮಂಗಳವಾರವಷ್ಟೇ 149 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದ ಜಿಲ್ಲೆಯಲ್ಲಿ ಬುಧವಾರ ಮತ್ತೆ 162 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3,996ಕ್ಕೆ ಏರಿದೆ. ಇದರ ಜೊತೆಗೆ ಕೋವಿಡ್‌ಗೆ ಮತ್ತೆ ಐವರು ಬಲಿಯಾಗಿದ್ದು, ಸಾವಿನ ಸಂಖ್ಯೆ 92ಕ್ಕೆ ಏರಿದೆ.

ಕೊರೋನ ಸೋಂಕು ದಿನದಿಂದ ದಿನಕ್ಕೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ನಿತ್ಯದ ಕಾರ್ಯಗಳಿಗೂ ಜನ ಹೊರಗಡೆ ಬರಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ. ಸುಮಾರು ನಾಲ್ಕೈದು ತಿಂಗಳಿಂದ ಎಡಬಿಡದೇ ಕಾಡುತ್ತಿರುವ ಈ ಸೋಂಕಿಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ ಶತಕ ಸಮೀಪಿಸುತ್ತಿದೆ. 

ಜಿಲ್ಲೆಯಲ್ಲಿ ಬುಧವಾರ ಮತ್ತೆ 162 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ ಶೀತ ಲಕ್ಷಣ ಹೊಂದಿರುವವರ ಸಂಖ್ಯೆಯೇ ಅಧಿಕ ಮಟ್ಟದಲ್ಲಿದೆ. ಶೀತ-70, ಸೋಂಕಿನ ಮೂಲ ಪತ್ತೆಯಾಗದ 60, ತೀವ್ರ ಉಸಿರಾಟ-18, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 13, ವಿದೇಶದಿಂದ ಆಗಮಿಸಿದ್ದ ಓರ್ವನಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಎಲ್ಲರನ್ನೂ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

69 ಡಿಸ್ಚಾರ್ಜ್: ಆಶಾದಾಯಕ ಬೆಳವಣಿಗೆಯಲ್ಲಿ ಬುಧವಾರ ವಿವಿಧ ಆಸ್ಪತ್ರೆಗಳಿಂದ 69 ಮಂದಿ ಕೊರೋನದಿಂದ ಮುಕ್ತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ 1,744 ಮಂದಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 2,160 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಹಲವರು ಐಸಿಯು, ವೆಂಟಿಲೇಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕ ಸೋಂಕಿತರ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 30,297 ಮಂದಿಯ ವರದಿಯನ್ನು ಪರೀಕ್ಷಿಸಲಾಗಿದೆ. ಈ ಪೈಕಿ 26,301 ಮಂದಿಯ ವರದಿ ನೆಗೆಟಿವ್ ಬಂದಿದ್ದು, 3,996 ಮಂದಿಯ ವರದಿಯು ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೋವಿಡ್‌ಗೆ ಮತ್ತೆ ಐವರು ಬಲಿ
ಕೊರೋನ ಸೋಂಕಿನಿಂದಾಗಿ ಜಿಲ್ಲೆಯಲ್ಲಿ ಮೃತಪಡುತ್ತಿರುವವ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಬುಧವಾರ ಮತ್ತೆ ಐವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಒಟ್ಟು ಸಂಖ್ಯೆ 92ಕ್ಕೆ ಏರಿಕೆಯಾಗಿದೆ.

ಮೃತರಲ್ಲಿ ಮಂಗಳೂರಿನ ಮೂವರು, ಪುತ್ತೂರು ಹಾಗೂ ದಾವಣಗೆರೆಯ ತಲಾ ಓರ್ವ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಬಲಿಯಾದವರಲ್ಲಿ ನಾಲ್ವರು ಮಹಿಳೆಯರಾದರೆ, ಓರ್ವ ಪುರುಷ. ಮೃತರು 54 ವರ್ಷಕ್ಕಿಂತ ಮೇಲ್ಪಟ್ಟವರು.

ಮಂಗಳೂರಿನ 60 ವರ್ಷದ ವೃದ್ಧೆ ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ದೀರ್ಘಕಾಲದ ಮಧುಮೇಹ, ತೀವ್ರ ಉಸಿರಾಟ ತೊಂದರೆ, 75 ವರ್ಷದ ವೃದ್ಧೆ ಮೂತ್ರಪಿಂಡ ಸಮಸ್ಯೆ, ಹೆಪಟೈಟಿಸ್-ಬಿ, ಮಧುಮೇಹ, 66 ವರ್ಷದ ವೃದ್ಧೆಯು ಬ್ಯಾಕ್ಟಿರಿಯಲ್ ಇನ್‌ಫೆಕ್ಷನ್, ಮೂತ್ರಪಿಂಡ ವೈಫಲ್ಯ, ಪುತ್ತೂರಿನ 70 ವರ್ಷದ ವೃದ್ಧೆಯು ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಹೆಪಟೈಟಿಸ್-ಬಿ, ದಾವಣಗೆರೆಯ 54 ವರ್ಷದ ಪುರುಷನು ಹೃದಯ ಸ್ತಂಭನ, ಅಧಿಕ ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು.

ಮೃತಪಟ್ಟ ಐವರಲ್ಲೂ ಕೊರೋನ ಸೋಂಕು ಪತ್ತೆಯಾಗಿತ್ತು. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಬಲಿಯಾದ 92 ಮಂದಿಯಲ್ಲಿ 16 ಮಂದಿ ಹೊರಜಿಲ್ಲೆಯವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News