ಮುಕೇಶ್ ಅಂಬಾನಿ ಜಗತ್ತಿನ 5ನೇ ಅತಿ ದೊಡ್ಡ ಶ್ರೀಮಂತ

Update: 2020-07-22 18:10 GMT

ಹೊಸದಿಲ್ಲಿ, ಜು.22: ಮುಕೇಶ್ ಅಂಬಾನಿ ಜಗತ್ತಿನ 5ನೇ ಅತಿ ಸಿರಿವಂತ ವ್ಯಕ್ತಿಯೆಂದು ‘ಫೋರ್ಬ್ಸ್’ ಪತ್ರಿಕೆ ವರದಿ ಮಾಡಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥರಾದ ಮುಕೇಶ್ ಅಂಬಾನಿ, ಅಮೆರಿಕದ ಹೂಡಿಕೆದಾರ, ಉದ್ಯಮಿ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ್ದಾರೆಂದು ಫೋರ್ಬ್ಸ್ ತಿಳಿಸಿದೆ. ಮುಕೇಶ್ ಅಂಬಾನಿಯ ಸಂಪತ್ತಿನ ಮೌಲ್ಯ 75 ಶತಕೋಟಿ ಡಾಲರ್ (5.61 ಲಕ್ಷ ಕೋಟಿ ರೂ.) ಆಗಿರುವುದಾಗಿ ಫೋರ್ಬ್ಸ್ ತಿಳಿಸಿದೆ. ಜನಪ್ರಿಯ ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್‌ಬುಕ್‌ನ ಸಹಸಂಸ್ಥಾಪಕ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್ ಸಂಪತ್ತಿನ ಮೌಲ್ಯ 89 ಶತಕೋಟಿ ಡಾಲರ್ ಆಗಿದ್ದು, ನಾಲ್ಕನೆ ಸ್ಥಾನದಲ್ಲಿದ್ದಾರೆ. ಅವರ ಆನಂತರದ ಸ್ಥಾನದಲ್ಲಿ ಮುಕೇಶ್ ಇದ್ದಾರೆ.

 ರಿಲಾಯನ್ಸ್ ಇಂಡಸ್ಟ್ರೀಸ್‌ನ ಶೇರುಗಳ ಮೌಲ್ಯಬುಧವಾರದಂದು ಸಾರ್ವಕಾಲಿಕ ಏರಿಕೆಯನ್ನು ಕಂಡಿದೆ. ಪ್ರತಿ ಶೇರಿನ ದರವು 2010 ರೂ.ಗಳಿಗೆ ಏರುವ ಮೂಲಕ ರಿಲಾಯನ್ಸ್ ಉದ್ಯಮ ಸಮೂಹದ ಮಾರುಕಟ್ಟೆ ಬಂಡವಾಳೀಕರಣದ 12.70 ಲಕ್ಷ ಕೋಟಿ ರೂ.ಗೆ ತಲುಪಿದೆ.

ಬುಧವಾರದಂದು ಮುಕೇಶ್ ಅಂಬಾನಿಯವರ ಸಂಪತ್ತಿನ ಒಟ್ಟು ಮೌಲ್ಯವು 3.2 ಶತಕೋಟಿ ಡಾಲರ್‌ಗಳಾಗಿದ್ದು, ಶೇ.4.49ರಷ್ಟು ಜಿಗಿತವನ್ನು ಕಂಡಿದೆಯೆಂದು ಫೋರ್ಬ್ಸ್ ವರದಿಯಲ್ಲಿ ತಿಳಿಸಿದೆ.

ಫೋಬ್ಸ್ ಬುಧವಾರ ಪ್ರಕಟಿಸಿದ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಅಮೆಝಾನ್‌ನ ಸ್ಥಾಪಕ ಹಾಗೂ ಸಿಇಓ ಜೆಫ್ ಬೆರೊಸ್ ನಂ.1 ಸ್ಥಾನದಲ್ಲಿದ್ದು, ಅವರ ಸಂಪತ್ತಿನ ಒಟ್ಟು ಮೌಲ್ಯ 185.8 ಶತಕೋಟಿ ಡಾಲರ್‌ಗಳಾಗಿವೆ.

ಬೆರೊಸ್ ಬಳಿಕ ಮೈಕ್ರೋಸಾಫ್ಟ್‌ನ ಸಹಸಂಸ್ಥಾಪಕ ಬಿಲ್ ಗೇಟ್ಸ್ (113.1 ಶತಕೋಟಿ ಡಾಲರ್) ಎರಡನೆ ಸ್ಥಾನದಲ್ಲಿದ್ದಾರೆ. ಲಕ್ಸುರಿ ಸಾಮಾಗ್ರಿಗಳ ತಯಾರಕ ಸಂಸ್ಥೆಯಾದ ಎಲ್‌ವಿಎಂಎಚ್‌ನ ವರಿಷ್ಠ ಬರ್ನಾರ್ಡ್ ಅರ್ನಾಲ್ಟ್ ಹಾಗೂ ಅವರ ಕುಟುಂಬ ಪಟ್ಟಿಯಲ್ಲಿ ಮೂರನೆ ಸ್ಥಾನದಲ್ಲಿದ್ದು, 112 ಶತಕೋಟಿ ಡಾಲರ್‌ಗಳ ಸಂಪತ್ತನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News