ಡಾ. ಕಾರಂತರ ಬದುಕು ಕೇವಲ ವೆಬ್‍ಸೈಟ್‍ನಲ್ಲಿ ಹಿಡಿದಿಟ್ಟುಕೊಳ್ಳಲು ಅಸಾಧ್ಯ: ಸಚಿವ ಕೋಟ

Update: 2020-07-24 13:52 GMT

ಪುತ್ತೂರು: ಡಾ. ಶಿವರಾಮ ಕಾರಂತರ ಬದುಕಿನ ಆಳ ಮತ್ತು ಅಗಲ, ವ್ಯಕ್ತಿತ್ವ ಮತ್ತು ಸಿದ್ದಾಂತ ವಿಸ್ತಾರವಾಗಿದ್ದು, ಅದನ್ನು ಕೇವಲ ಒಂದು ವೆಬ್‍ಸೈಟ್‍ನಲ್ಲಿ ಹಿಡಿದಿಟ್ಟುಕೊಳ್ಳುವುದು ಅಸಾಧ್ಯವಾಗಿದೆ. ಆದಾಗ್ಯೂ ಕಾರಂತರ ಬದುಕನ್ನು ವಿಶ್ವಕ್ಕೆ ತಲುಪಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. 

ಅವರು ಶುಕ್ರವಾರ ಸಂಜೆ ಪುತ್ತೂರಿನ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ನಡೆದ ಸರಳ ಸಮಾರಂಭದಲ್ಲಿ `ಡಾ. ಶಿವರಾಮ ಕಾರಂತರ ಬಾಲವನ' ವೆಬ್‍ಸೈಟ್ ಉದ್ಘಾಟಿಸಿ ಮಾತನಾಡಿದರು. ಬಾಲವನದಲ್ಲಿ ನಿತ್ಯ ಚಟುವಟಿಕೆ ನಡೆಸುವುದರೊಂದಿಗೆ ವೆಬ್‍ಸೈಟ್ ಮೂಲಕ ಕಾರಂತರ ಬಗ್ಗೆ ಜಗತ್ತಿಗೆ ತಿಳಿಸುವ ಕೆಲಸ ಮಾಡುತ್ತಿರುವುದು ಸಮಾಧಾನ ತರುವ ವಿಷಯವಾಗಿದೆ ಎಂದ ಅವರು ಕಾರಂತರನ್ನು ಅಥೈಸಿಕೊಳ್ಳುವುದು ಸುಲಭದ ವಿಷಯವಲ್ಲ. ಅವರ ಕಾದಂಬರಿಗಳು, ಲೇಖನಗಳು ಅವರಲ್ಲಿನ ಅನುಭವದ ಮಾತುಗಳಾಗಿವೆ. ಬಾಲವನವು ಮುಂದಿನ ಪೀಳಿಗೆಗೆ ಬಳಸುವ ಸೊತ್ತಾಗಿ ರೂಪುಗೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸಚಿವರು ಬಾಲವನ ವಠಾರದಲ್ಲಿ ನಿರ್ಮಾಣವಾಗಲಿರುವ ಚಿಟ್ಟೆಪಾರ್ಕ್‍ಗೆ ಗಿಡ ನೆಡುವ ಮೂಲಕ ಚಾಲನೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ ಡಾ. ಶಿವರಾಮ ಕಾರಂತರ 40 ವರ್ಷಗಳ ಕರ್ಮಭೂಮಿಯಾಗಿದ್ದ ಬಾಲವನವನ್ನು ಎಲ್ಲೆಡೆ ಪಸರಿಸುವುದರ ಜೊತೆಗೆ ಅವರ ಕಲೆ, ಸಾಹಿತ್ಯ, ಬಹುಮುಖತೆಯನ್ನು ಎಲ್ಲೆಡೆ ತಿಳಿಸುವ ಕೆಲಸಗಳು ನಡೆಯಬೇಕಾಗಿದೆ. ಅವರ ಸಾಹಿತ್ಯ ಮತ್ತು ಸಿದ್ದಾಂತವನ್ನು ಮುಂದಿನ ಪೀಳಿಗೆ ಬದುಕಿನಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದರು. 

ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ತಹಸೀಲ್ದಾರ್ ರಮೇಶ್ ಬಾಬು, ನಗರಸಭಾ ಪೌರಾಯುಕ್ತೆ ರೂಪಾ ಟಿ ಶೆಟ್ಟಿ ಉಪಸ್ಥಿತರಿದ್ದರು. 
ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಬಾಲವನ ಆಡಳಿತಾಧಿಕಾರಿ ಡಾ. ಸುಂದರ್ ಕೇನಾಜೆ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ವಂದಿಸಿದರು. ಬಾಲವನ ಕಾರ್ಯಕ್ರಮ ಸಂಯೋಜಕ ಕೃಷ್ಣಪ್ಪ ಬಂಬಿಲ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News