ಆ.15ರೊಳಗೆ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಹೈ ಫ್ಲೋ ಆಕ್ಸಿಜನ್: ನಳಿನ್ ಕುಮಾರ್ ಕಟೀಲ್

Update: 2020-07-25 11:38 GMT

ಮಂಗಳೂರು, ಜು.25: ಕೊರೋನ ನಿಯಂತ್ರಣದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ಮುಂಚೂಣಿಯಲ್ಲಿದ್ದು, ಇದೀಗ ಆರೋಗ್ಯ ವ್ಯವಸ್ಥೆ ಸುಧಾರಣೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆ. 15ರೊಳಗೆ ಹೈ ಪ್ಲೋ ಅಕ್ಸಿಜನ್ ಸೌಲಭ್ಯ ಒದಗಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ನಾಳೆಗೆ ಒಂದು ವರ್ಷವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಸಾಧನೆಗಳ ಕುರಿತಂತೆ ಅವರು ಬಿಜೆಪಿಯ ಜಿಲ್ಲಾ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಅಧಿಕಾರ ವಹಿಸಿಕೊಂಡಾಗ ಬರ, ಪ್ರವಾಹ ಸಮಸ್ಯೆಗಳೊಂದಿಗೆ ಇದೀಗ ಕೊರೋನ ಸವಾಲನ್ನು ಸಮರ್ಥವಾಗಿ ಎದುರಿಸುತ್ತಾ ಸರಕಾರ ಒಂದು ವರ್ಷವನ್ನು ಪೂರೈಸುತ್ತಿದೆ. ಅನ್ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ಅವರ ಜೀವರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿ ಸ್ತ್ರೀಯರು, ವೃದ್ಧರು ಹಾಗೂ ಮಕ್ಕಳನ್ನು ಗುರುತಿಸಿ ಮುನ್ನೆಚ್ಚರಿಕೆ ನೀಡುವ ಸಲುವಾಗಿ ರಾಜ್ಯದಲ್ಲಿ 1.5 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿದ್ದು, ಇಂತಹ ಸಮೀಕ್ಷೆ ನಡೆಸಿದ ಮೊದಲ ರಾಜ್ಯ ಕರ್ನಾಟಕ ಎಂದು ಅವರು ಹೇಳಿದರು.

ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಿಸಿದ ಸಂದರ್ಭದಲ್ಲಿ 2272 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಅಸಂಘಟಿತ ವಲಯದ ಕಾರ್ಮಿಕರು, ಹೂ- ಹಣ್ಣು ತರಕಾರಿ ಬೆಳೆದ ರೈತರು, ನೇಕಾರರು, ಟ್ಯಾಕ್ಸಿ ಮತ್ತು ಆಟೋ ಚಾಲಕರು, ಕ್ಷೌರಿಕರು, ಮಡಿವಾಳರು ಮತ್ತು ಚರ್ಮ ಕುಶಲಕರ್ಮಿಗಳಿಗೆ ಪರಿಹಾರ ಒದಗಿಸಲಾಗಿದೆ. ಪ್ರವಾಹ, ಕೋವಿಡ್ ನಡುವೆಯೂ ರಾಜ್ಯದ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಆದ್ಯತೆ ನೀಡಲಾಗಿದ್ದು, ಸ್ವಿರ್ಝರ್ಲೆಂಡಿನನ ದಾವೂಸ್ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫಾರಂ ಸಮಾವೇಶದಲ್ಲಿ ಮುಖ್ಯಮಂತ್ರಿ ಪಾಲ್ಗೊಂಡು 40ಕ್ಕೂ ಹೆಚ್ಚು ಜಾಗತಿಕ ಕಂಪನಿಗಳು ಹೂಡಿಕೆ ಮಾಡಲು ಮನವೊಲಿಸಿದ್ದಾರೆ. ಲಾಕ್ಡೌನ್ ನಂತರ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಆರ್ಥಿಕ ಚಟುವಟಿಕೆಗಳನ್ನು ಪ್ರಾಂಭಿಸಿದ ಮುಂಚೂಣಿ ರಾಜ್ಯ ಕರ್ನಾಟಕ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದಾಗಿ ಹೇಳಿದ ಸಂಸದ ನಳಿನ್, ರೈತರು ಹಾಗೂ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಭೂಸುಧಾರಣಾ ಕಾಯ್ದೆಯ ಸೆಕ್ಷನ್ 79 ಎ ಮತ್ತು ಬಿಗಳಿಗೆ ತಿದ್ದುಪಡಿ ತರಲಾಗಿದೆ. ಇದರಿಂದ ರೈತರ ಶೋಷಣೆ ತಪ್ಪಲಿದೆ ಎಂದರು.

ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ ಆರೋಪದ ಕುರಿತಂತೆ ಈಗಾಗಲೇ ಐದು ಮಂದಿ ಸಚಿವರು ಪೂರ್ಣ ಪ್ರಮಾಣದ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಯಾಕೆ ಅಗತ್ಯವಿಲ್ಲದೆ ವೆಂಟಿಲೇಟರ್ಗಳನ್ನು ಖರೀದಿಸಲಾಗಿದೆ ಎಂಬ ಉತ್ತರ ನೀಡಲಿ ಎಂದು ಸಂಸದ ನಳಿನ್ ಸವಾಲೆಸೆದರು.

ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚಳವಾಗುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಲ್ಲಿ ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಸೌಲಭ್ಯಗಳು, ಆಸ್ಪತ್ರೆಗಳು ಇರುವುದರಿಂದ ಹೊರ ರಾಜ್ಯ ಹಾಗೂ ಜಿಲ್ಲೆಗಳವರು ಇಲ್ಲಿ ಕೊನೆ ಹಂತದ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ವಿವಿಧ ರೋಗಗಳಿಂದ ಬಳಲುತ್ತಿರುವವರಿಗೆ ಕೊನೆ ಹಂತದಲ್ಲಿ ಕೊರೋನ ಸೋಂಕು ಬಾಧಿಸಿರುವುದರಿಂದ ಸಾವಿನ ಪ್ರಮಾಣ ಹೆಚ್ಚಾದಂತೆ ಕಂಡು ಬರುತ್ತಿದೆ. ಕೊರೋನ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಫಲ ಆಗಿರುವುದು, ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುತ್ತಿರುವುದು ನೋಡಿ ಕಾಂಗ್ರೆಸ್ ನವರು ಅನಿವಾರ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಉಪಸ್ಥಿತರಿದ್ದರು.

ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ರೈತರ ಪರವಾಗಿದೆ. ರೈತರು ವಿರೋಧಿಸುತ್ತಿಲ್ಲ. ರಾಜಕಾರಣ ಮಾಡುವ ರಾಜಕಾರಣಿಗಳು ವಿರೋಧಿಸುತ್ತಿದ್ದಾರೆ.

* ಕೋಟ ಶ್ರೀನಿವಾಸ ಪೂಜಾರಿ, ಉಸ್ತುವಾರಿ ಸಚಿವರು, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News