ಆನ್ ಲೈನ್ ನಲ್ಲೇ ಮದುವೆ, ಕಂಪ್ಯೂಟರ್, ಮೊಬೈಲ್ ಸ್ಕ್ರೀನ್ ಮೂಲಕ ಭಾಗವಹಿಸಿದ ನೆಂಟರು !

Update: 2020-07-25 12:32 GMT

ಭಟ್ಕಳ: ಕೊರೋನ ಲಾಕ್ ಡೌನ್ ನಿಂದಾಗಿ ಜಗತ್ತಿನಾದ್ಯಂತ ಜನರು ಕಂಗಾಲಾಗಿದ್ದು, ಜನರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗಬೇಕಾದರೆ ಅಲ್ಲಿನ ಕ್ವಾರೆಂಟೈನ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಲವಾರು ಕಾರ್ಯಕ್ರಮಗಳು ಈಗ ಆನ್ ಲೈನ್ ನಲ್ಲಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಭಟ್ಕಳದ ಯುವಕ ಬೆಂಗಳೂರಿನಲ್ಲಿದ್ದುಕೊಂಡು ಚೆನ್ನೈನಲ್ಲಿರುವ ಯುವತಿಯೊಂದಿಗೆ ಆನ್ ಲೈನ್ ಮೂಲಕ ವಿವಾಹವಾಗಿದ್ದು, ಇದು ಭಟ್ಕಳದ ಇತಿಹಾಸದಲ್ಲಿ ಮೊದಲ ಆನ್ ಲೈನ್ ವಿವಾಹವಾಗಿದೆ.

ಭಟ್ಕಳದ ಮೊದಲ ಸಚಿವ ದಿ.ಜುಕಾಕೋ ಶಂಸುದ್ದೀನ್ ರ ಮರಿಮೊಮ್ಮಗ ಮುಹಮ್ಮದ್ ಆದಿಲ್ ಕೌಡ ಮಾಲ್ದೀವ್ಸ್ ನಲ್ಲಿ ಪೈಲಟ್ ಆಗಿದ್ದು, ಲಾಕ್ ಡೌನ್ ಗೆ ಮೊದಲು ತನ್ನ ಹೆತ್ತವರೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ. ಲಾಕ್ ಡೌನ್ ಘೋಷಣೆಯಾದ ಬಳಿಕ ಅವರು ಬೆಂಗಳೂರಿನಲ್ಲೇ ಸಿಲುಕಿಕೊಂಡಿದ್ದಾರೆ. ಈ ನಡುವೆ ಅವರ ನಿಶ್ಚಿತಾರ್ಥ ಚೆನ್ನೈ ಮೂಲದ ಆಂಬೂರು ನಿವಾಸಿ ಆಫಿಯಾ ಮರಿಯಂ ಜೊತೆ ನಡೆದಿದೆ.

(ಮುಹಮ್ಮದ್ ಆದಿಲ್ ಕೌಡ)

ನೂರಾರು ಕಿ.ಮೀ. ದೂರ ಇರುವ ವಧು ಮತ್ತು ವರರ ವಿವಾಹಕ್ಕಾಗಿ ಒಂದು ಕಡೆ ಸೇರುವುದು ಕಷ್ಟವಾಗಿರುವ ಈ ಪರಿಸ್ಥಿತಿಯಲ್ಲಿ ಆನ್ ಲೈನ್ ಮೂಲಕ ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಪ್ರಪಂಚದ ವಿವಿಧ ಭಾಗಗಳಲ್ಲಿರುವ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ಸಿಸ್ಕೋ ಆ್ಯಪ್ ಮೂಲಕ ಆನ್ ಲೈನ್ ನಲ್ಲಿ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡರು.

ಮೂಲಗಳ ಪ್ರಕಾರ, ಭಟ್ಕಳ ಮೂಲದ ಮುಹಮ್ಮದ್ ಆದಿಲ್ ಕೌಡ (ತಂದೆ ಮುಹಮ್ಮದ್ ಸ್ವಾಲೇಹ್ ಕೌಡ) ಮಾಲ್ಡೀವ್ಸ್ ನಲ್ಲಿ ಪೈಲಟ್ ಆಗಿದ್ದಾರೆ. ಚೆನ್ನೈ ಮತ್ತು ಲಕ್ನೋ ನಂತರ ಮಾಲ್ಡೀವ್ಸ್ ನಲ್ಲಿ ಅವರು ಶಿಕ್ಷಣ ಪಡೆದರು. ಅವರು ಪೈಲಟ್ ಆದಾಗಿನಿಂದಲೂ ಅಲ್ಲೇ ವಾಸಿಸುತ್ತಿದ್ದಾರೆ.

ಕಳೆದ ನಾಲ್ಕು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಿಲುಕೊಂಡಿದ್ದ ಇವರು ತಮ್ಮ ವಿವಾಹವನ್ನು ಅತ್ಯಂತ ಸರಳ ರೀತಿಯಿಂದ ನಡೆಸಲು ನಿರ್ಧರಿಸಿ ಆನ್ ಲೈನ್ ನಲ್ಲಿ ವಿವಾಹವಾಗುವ ನಿರ್ಧಾರ ಕೈಗೊಂಡರು. ಹಾಗಾಗಿ ಖಾಜಿ ಸಾಹಿಬ್ ರನ್ನು ತಮ್ಮ ಮನೆಗೆ ಆಹ್ವಾನಿಸಿ ನಾಲ್ಕು ಆಪ್ತರೊಂದಿಗೆ ಆನ್ಲೈನ್ ನಲ್ಲಿ ವಿವಾಹ ಸಮಾರಂಭವನ್ನು ಏರ್ಪಡಿಸಿದರು.

ಭಟ್ಕಳ ಮೂಲದ ಚೆನ್ನೈನ ಅಬ್ದುರ್ರಹೀಂ ಪಟೇಲ್ ಅವರು ಕುರಿತಂತೆ ಮಾಹಿತಿ ನೀಡಿದ್ದು, ವಿವಾಹಕ್ಕೆ ಸಂಬಂಧಿಸಿ ಎಲ್ಲ ರೀತಿಯ ದಾಖಲೆಗಳ ಕೆಲಸಗಳು ಈಗಾಗಲೆ ಚೆನ್ನೈನಲ್ಲಿ ಪೂರ್ಣಗೊಂಡಿವೆ, ಇತರ ಕಾರ್ಯಗಳನ್ನು ಖಾಜಿ ಸಾಹಿಬ್ ಮತ್ತು ಅವರ ಮುಂದೆ ಸಹಿ ಹಾಕುವ ಮೂಲಕ ವಿವಾಹ ನೆರವೇರಿಸಲಾಗಿದೆ ಎಂದರು.

ಸಿಸ್ಕೋ ಆ್ಯಪ್ ಮೂಲಕ ಇಡೀ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ಮಾಡಲಾಯಿತು.

‘ಯುವಕ/ಯುವತಿಯರಿಗೆ ಮಾದರಿಯಾಗಲಿ’

ಕೊರೋನ ಲಾಕ್ ಡೌನ್ ನಿಂದ ಭಟ್ಕಳದಲ್ಲಿ ನಡೆಯಬೇಕಿದ್ದ ನೂರಕ್ಕೂ ಹೆಚ್ಚು ವಿವಾಹಗಳು ಸ್ಥಗಿತಗೊಂಡಿವೆ. ಕೆಲವರು ದಿನಾಂಕಗಳನ್ನು ನಿಗದಿಪಡಿಸಿಕೊಂಡಿದ್ದರು. ಆದರೆ ವಿವಾಹ ಸಮಾರಂಭದಲ್ಲಿ ಜನರು ಸೇರುವ ಸಮಸ್ಯೆಯಿಂದಾಗಿ ಬಹಳಷ್ಟು ವಿವಾಹಗಳು ರದ್ದಾಗಿವೆ. ಆನ್ ಲೈನ್ ವಿವಾಹಗಳಲ್ಲಿ ಯಾವುದೇ ಸಮಸ್ಯೆ ಎದುರಾಗದು. ಇದರಿಂದಾಗಿ ಹಣಕಾಸು ಉಳಿತಾಯವೂ ಆಗುತ್ತದೆ. ಇಂತಹ  ವಿವಾಹಗಳನ್ನು ಹೆಚ್ಚೆಚ್ಚು ಪ್ರೋತ್ಸಾಹಿಸಬೇಕಾಗುತ್ತದೆ ಎನ್ನುತ್ತಾರೆ ಆದಿಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News