ರಾಜ್ಯದ ಜನತೆಯ ಆದ್ಯತೆಗೆ ಸ್ಪಂದಿಸಿದ ಸಿಎಂ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್

Update: 2020-07-25 13:47 GMT

ಮಂಗಳೂರು, ಜು.25: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದು ಇದೇ ಜು.26ಕ್ಕೆ ವರ್ಷ ಪೂರ್ಣಗೊಳ್ಳಲಿದೆ. ರಾಜ್ಯದಲ್ಲಿ ಬರ, ನೆರೆ, ಇದೀಗ ಕೋವಿಡ್. ಈ ಎಲ್ಲ ಸಂಕಷ್ಟದ ಮಧ್ಯೆ ಮುಖ್ಯಮಂತ್ರಿ ಜನತೆಯ ಆದ್ಯತೆಗಳಿಗೆ ಸ್ಪಂದಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹೇಳಿದ್ದಾರೆ.

 ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19ರ ಲಾಕ್‌ಡೌನ್ ಬಳಿಕ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ. ‘ಎಕಾಮಿಕ್ಸ್ ಟೈಮ್ಸ್’ ಪತ್ರಿಕೆಯ ವರದಿಯ ಪ್ರಕಾರ ಆರ್ಥಿಕ ಚಟುವಟಿಕೆಗಳ ಪುನರಾರಂಭ ಪ್ರಕ್ರಿಯೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿ ರಾಜ್ಯವಾಗಿದೆ ಎಂದರು.

2019-20ರಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಕುಸಿತ ಕಂಡಿದ್ದರೂ ಭೀಕರವಾದ ಪ್ರವಾಹ ಮತ್ತು ಕೋವಿಡ್ ಸಂಕಷ್ಟದ ನಡುವೆ ರಾಜ್ಯದ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಸರಕಾರ ಶಕ್ತಿ ಮೀರಿ ಪ್ರಯತ್ನಿಸಿದೆ. ಕೈಗಾರಿಕಾ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಸಂಪನ್ಮೂಲ ಸಂಗ್ರಹಕ್ಕೆ ಎಚ್ಚರ ವಹಿಸಲಾಗಿದೆ ಎಂದರು.

ಕೋವಿಡ್ ನಿಯಂತ್ರಣಕ್ಕಾಗಿ ರಾಷ್ಟ್ರದಲ್ಲಿ ಲಾಕ್‌ಡೌನ್ ಘೋಷಿಸಿದ ವೇಳೆ ರೂ.2,272 ಕೋಟಿ ಪ್ಯಾಕೇಜ್ ಪ್ರಕಟಿಸಿದ ರಾಜ್ಯ ಕರ್ನಾಟಕ. ಇದರಿಂದಾಗಿ ಅಸಂಘಟಿತ ವಲಯದ ಕಾರ್ಮಿಕರು, ಹೂವು-ಹಣ್ಣು-ತರಕಾರಿ ಬೆಳೆಗಾರರು, ನೇಕಾರರು,ಟ್ಯಾಕ್ಸಿಘಿ, ಅಟೋರಿಕ್ಷಾ ಚಾಲಕ-ಮಾಲಕರು, ಕ್ಷೌರಿಕರು, ಮಡಿವಾಳರು, ಚರ್ಮ ಕುಶಲ ಕರ್ಮಿಗಳಿಗೆ ಪರಿಹಾರ ಒದಗಿಸುವುದು ಸಾಧ್ಯವಾಗಿದೆ ಎಂದು ನಳಿನ್‌ಕುಮಾರ್ ತಿಳಿಸಿದರು.

ಕೋವಿಡ್ ನಿಯಂತ್ರಣಕ್ಕೆ ರಾಷ್ಟ್ರದಲ್ಲಿ ಪ್ರಥಮವಾಗಿ ಲಾಕ್‌ಡೌನ್ ಘೋಷಿಸಿದ ಯಡಿಯೂರಪ್ಪ ಸರಕಾರ, ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಲ್ಲಿಯೂ ಮುಂದಿದೆ. ಮುಂಗಡ ಪಡಿತರ ವಿತರಣೆ, ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೂ ಪಡಿತರ ವಿತರಿಸುವ ಮೂಲಕ ಬಿಜೆಪಿ ಸರಕಾರ ಮಾನವೀಯತೆ ಮೆರೆದಿದೆ ಎಂದವರು ನುಡಿದರು.

ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರನ್ನು ಗುರುತಿಸಿ ಮುನ್ನೆಚ್ಚರಿಕೆ ವಹಿಸಲು ಕುಟುಂಬಗಳ ಸಮೀಕ್ಷೆ ನಡೆಸಿದ ರಾಷ್ಟ್ರದ ಮೊದಲ ರಾಜ್ಯ ಕರ್ನಾಟಕ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ನಾಗರಿಕರೆಲ್ಲರ ಕಾಳಜಿ ಹೊಂದಿರುವುದಕ್ಕೆ ಇದು ಸಾಧ್ಯವಾಗಿದೆ. 1.5 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ವಿವರಿಸಿದರು.

ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ. ರೋಗ ಲಕ್ಷಣಗಳು ಇಲ್ಲದ ಮತ್ತು ಲಘು ಲಕ್ಷಣಗಳು ಇರುವ ಸೋಂಕಿತರ ಆರೈಕೆಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10,100 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೋವಿಡ್ ಆರೈಕೆ ಕೇಂದ್ರ ಅಗತ್ಯಕ್ಕೆ ತಕ್ಕಂತೆ ಸಿದ್ಧಗೊಳಿಸಲಾಗುತ್ತಿದೆ ಎಂದು ನಳಿನ್‌ಕುಮಾರ್ ನುಡಿದರು.

ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ ಸಣ್ಣ ಉದ್ದಿಮೆಗಳ ವಿದ್ಯುತ್ ಬಿಲ್ಲಿನ ನಿಗದಿತ ದರವನ್ನು ಮನ್ನಾ ಮಾಡಲಾಗಿದೆ. ಬೃಹತ್ ಕೈಗಾರಿಕೆಗಳ ನಿಗದಿತ ದರವನ್ನು ಬಡ್ಡಿ ರಹಿತವಾಗಿ ಪಾವತಿಸಲು ಅವಕಾಶ ನೀಡಲಾಗಿದೆ. ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ಜರುಗಿದ ‘ವರ್ಲ್ಡ್ ಇಕಾನಮಿಕ್ ೆರಂ’ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಂಡು 40ಕ್ಕೂ ಅಧಿಕ ಜಾಗತಿಕ ಕಂಪೆನಿಗಳ ಜೊತೆಯಲ್ಲಿ ಪ್ರತ್ಯೇಕ ಮಾತುತೆ ನಡೆಸಿ ರಾಜ್ಯದಲ್ಲಿ ಹೂಡಿಕೆ ಮಾಡಲು ಮನವೊಲಿಸಿದ್ದಾರೆ ಎಂದು ನಳಿನ್‌ಕುಮಾರ್ ತಿಳಿಸಿದರು.

ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಮತ್ತು ಪಾಕೃತಿಕ ವಿಕೋಪದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಸೂಚಿಸಲಾದ ಪರಿಹಾರಕ್ಕಿಂತ ಹೆಚ್ಚಿನ ಮೊತ್ತವನ್ನು ಪರಿಹಾರವಾಗಿ ನೀಡುವ ಮೂಲಕ ರಾಜ್ಯದ ಬಿಜೆಪಿ ಸರಕಾರ ಮಾನವೀಯತೆ ಮೆರೆದಿದೆ. ಮನೆ ಕಳಕೊಂಡವರಿಗೆ ಐದು ಲಕ್ಷ ರೂ. ತನಕ ಪರಿಹಾರ ನೀಡಲಾಗಿದೆ. ಮುಖ್ಯಮಂತ್ರಿಯೇ ಪ್ರವಾಹ ಮತ್ತು ಪ್ರಾಕೃತಿಕ ವಿಕೋಪ ಸಂಭವಿಸಿದ ಸ್ಥಳಗಳಿಗೆ ತೆರಳಿ ಪರಿಹಾರ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ಮಾಡಿರುವರು ಎಂದು ರಾಜ್ಯದ ಬಿಜೆಪಿ ಅಧ್ಯಕ್ಷರು ವಿವರಿಸಿದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ರೂ.4,000 ನೀಡುವ ಯೋಜನೆಯಿಂದ ರಾಜ್ಯದಲ್ಲಿ 50 ಲಕ್ಷಕ್ಕೂ ಅಧಿಕ ರೈತರಿಗೆ ಅನುಕೂಲವಾಗಿದೆ. ನೇಕಾರರಿಗೆ ಸಾಲಮನ್ನಾ ಮೂಲಕ ಬೆಂಬಲ ನೀಡಲಾಗಿದೆ. 2020-2021ನೇ ಸಾಲಿನಲ್ಲಿ 8,984 ಕೋಟಿ ರೂ. ಮೊತ್ತದಲ್ಲಿ 23.57 ಲಕ್ಷ ಮನೆಗಳನ್ನು ಗ್ರಾಮೀಣರಿಗಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ. ರೈತರ ಅನುಕೂಲಕ್ಕಾಗಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ನಳಿನ್‌ಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News