ಸಿಎಎ: ಪೌರತ್ವಕ್ಕಾಗಿ ಕ್ರೈಸ್ತ ಧರ್ಮಕ್ಕೆ ಅಫ್ಘಾನ್, ರೋಹಿಂಗ್ಯ ನಿರಾಶ್ರಿತರ ಮತಾಂತರ
ಹೊಸದಿಲ್ಲಿ, ಜು.24: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಡಿ ಭಾರತೀಯ ಪೌರತ್ವವನ್ನು ಪಡೆಯುವುದಕ್ಕಾಗಿ, ಹಲವಾರು ಅಫ್ಘಾನ್ ಹಾಗೂ ರೋಹಿಂಗ್ಯ ಮುಸ್ಲಿಂ ನಿರಾಶ್ರಿತರು ಕ್ರೈಸ್ತಧರ್ಮಕ್ಕೆ ಮತಾಂತರ ಹೊಂದಿರುವುದಾಗಿ ವರದಿಯಾಗಿದೆ.
ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ದಬ್ಬಾಳಿಕೆಗೊಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ನೀಡಲು, ಸಿಎಎ ಅವಕಾಶ ನೀಡುತ್ತದೆ. ಅಫ್ಘಾನ್ ಮುಸ್ಲಿಮರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ 25 ಪ್ರಕರಣಗಳು ಈವರೆಗೆ ಬೆಳಕಿಗೆ ಬಂದಿರುವುದಾಗಿ ತನಿಖಾ ಸಂಸ್ಥೆಗಳು ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿವೆ.
ಸಂಸತ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರಗೊಂಡ ಬಳಿಕ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಬಯಸುವ ಅಫ್ಘಾನ್ ಮುಸ್ಲಿಮರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ ಎಂದು ದಕ್ಷಿಣ ದಿಲ್ಲಿಯಲ್ಲಿನ ಅಫ್ಘಾನ್ ಚರ್ಚ್‌ನ ವರಿಷ್ಠ ಆದೀಬ್ ಅಹ್ಮದ್ ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ.
ದೌರ್ಜನ್ಯದಿಂದ ಪಾರಾಗಲು ತಮಗೆ ಧರ್ಮವನ್ನು ಬದಲಾಯಿಸದೆ ಬೇರೆ ದಾರಿಯೇ ಇಲ್ಲದಿರುವುದು ದುರದೃಷ್ಟಕರವೆಂದು ಮುಸ್ಲಿಂ ನಿರಾಶ್ರಿತರ ಪರ ಹೋರಾಟಗಾರ್ತಿ ಅಫ್ರೀನ್ ಫಾತಿಮಾ ಹೇಳುತ್ತಾರೆ. ‘‘ನೀವು ಧರ್ಮದ ಆಧಾರದಲ್ಲಿ ಪೌರತ್ವವನ್ನು ನೀಡುವುದಾದಲ್ಲಿ, ಜನರಿಗೆ ಧರ್ಮವನ್ನು ಬದಲಾಯಿಸದೆ ಬೇರೆ ಆಯ್ಕೆಯೇ ಇಲ್ಲವಾಗಿದೆ’’ ಎಂದು ಆಕೆ ಮುಸ್ಲಿಂ ಮಿರರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನಿರಾಶ್ರಿತ ಮುಸ್ಲಿಮರು ಪೌರತ್ವಕ್ಕಾಗಿ ಧರ್ಮವನ್ನು ಬದಲಾಯಿಸಬೇಕಾದ ಪರಿಸ್ಥಿತಿಯುಂಟಾಗುವುದಕ್ಕೆ ‘ಮುಸ್ಲಿಂ ನಾಯಕತ್ವದ ವೈಫಲ್ಯವೇ ಕಾರಣ’ ಎಂದು ಭೀಮ್ ಆರ್ಮಿ ಪಕ್ಷದ ಕಾನೂನು ಸಲಹೆಗಾರ ಮಹಮೂದ್ ಪ್ರಾಚಾ ಬಣ್ಣಿಸಿದ್ದಾರೆ. ಒಂದು ವೇಳೆ ಈ ವರದಿ ನಿಜವೇ ಆಗಿದ್ದಲ್ಲಿ, ಮುಸ್ಲಿಂ ನಾಯಕತ್ವದ ಹೆಗಲಿಗೆ ಬಹುದೊಡ್ಡ ಹೊಣೆಗಾರಿಕೆಯೊಂದು ಬಿದ್ದಿದೆ. ನಿರ್ಬಂಧಕ್ಕೊಳಗಾಗಿ ಇತರ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಚಿಂತಿಸುವ ಮಟ್ಟಕ್ಕೆ ಬರುವಂತೆ ಮಾಡುವ ಮೂಲಕ ಈ ನಾಯಕರು ಸಮುದಾಯವನ್ನು ಜನರನ್ನು ಹೇಡಿಗಳನ್ನಾಗಿ ಮಾಡಿದ್ದಾರೆ’’ ಎಂ.ಎಂ. ಪ್ರಾಚಾ ಖಂಡಿಸಿದ್ದಾರೆ. ‘‘ಒಂದೋ ನಾವು ನಾಯಕತ್ವವನ್ನು ಬದಲಾಯಿಸಬೇಕಾಗಿದೆ ಇಲ್ಲವೇ ಹೇಡಿತನವನ್ನು ಆಳಿಸಿಹಾಕಬೇಕಾಗಿದೆ’’ ಎಂದವರು ಹೇಳಿದರು.
ಮುಸ್ಲಿಮರ ಹಕ್ಕುಗಳ ರಕ್ಷಣೆಯನ್ನು ಖಾತರಿಪಡಿಸುವಲ್ಲಿ ಮುಸ್ಲಿಂ ನಾಯಕರು ವಿಫಲರಾಗಿದ್ದಾರೆಂದು ಫಾತಿಮಾ ಹೇಳುತ್ತಾರೆ. ದೇಶಕ್ಕೆ ತಮ್ಮ ನಿಷ್ಠೆಯನ್ನು ನಿರಂತರವಾಗಿ ಸಾಬೀತುಪಡಿಸಬೇಕಾದಂತಹ ಅನವಶ್ಯಕವಾದ ಗೀಳು ಪ್ರವೃತ್ತಿ ಕಂಡುಬರುತ್ತಿದೆಯೆಂದು ಅವರು ಅಭಿಪ್ರಾಯಿಸುತ್ತಾರೆ. ದೇಶದ ಬಹುಸಂಖ್ಯಾತ ಸಮುದಾಯವು ಮುಸ್ಲಿಮರನ್ನು ಸಂಶಯದ ದೃಷ್ಟಿಯಿಂದ ಕಾಣುವದನ್ನು ಮುಂದುವರಿಸಿದೆಯೆಂದು ಅವರು ವಿಷಾದಿಸುತ್ತಾರೆ.
‘‘ಸಿಎಎ ಚಳವಳಿಯಿಂದಾಗಿ ಜಾಮಿಯಾ ಮಿಲ್ಲಿಯಾ, ಅಲಿಗಢ ಮುಸ್ಲಿಂ ವಿವಿಗಳಿಂದ ಉದಯಿಸಿರುವ ನೂತನ ನಾಯಕತ್ವವು ಭಾರತಕ್ಕೆ ನಿಷ್ಠೆಯನ್ನು ದೃಢಪಡಿಸಲು ಬಯಸುತ್ತಿದೆ. ಆದರೆ ಅದನ್ನು ಯಾರ ಮುಂದೆಯೂ ಸಾಬೀತುಪಡಿಸಬೇಕಾಗಿಲ್ಲ’ ಎಂದು ಫಾತಿಮಾ ಹೇಳಿದ್ದಾರೆ.