ದಿಲ್ಲಿ ಹಿಂಸಾಚಾರದ ವೀಡಿಯೊ ಪುರಾವೆ ಒದಗಿಸಲು ಅಸಡ್ಡೆ: ಪೊಲೀಸರನ್ನು ತರಾಟೆಗೆತ್ತಿಕೊಂಡ ನ್ಯಾಯಾಲಯ

Update: 2020-07-25 17:01 GMT

ಹೊಸದಿಲ್ಲಿ, ಜು.25: ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದಿದ್ದ ವ್ಯಾಪಕ ಹಿಂಸಾಚಾರದ ಷಡ್ಯಂತ್ರ ರೂಪಿಸಿದ ಆರೋಪಿಗಳ ವಿರುದ್ಧದ ವೀಡಿಯೊ ಪುರಾವೆಯನ್ನು ಒದಗಿಸಲು ಪೊಲೀಸರು ಅಸಡ್ಡೆ ತೋರಿದ್ದಾರೆ ಎಂದು ದಿಲ್ಲಿಯ ನ್ಯಾಯಾಲಯ ತರಾಟೆಗೆತ್ತಿಕೊಂಡಿದೆ.

ಈಶಾನ್ಯ ದಿಲ್ಲಿಯ ಜಫ್ರಾಬಾದ್, ಮೌಜ್‌ಪುರ ಮೆಟ್ರೋ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಮತ್ತು ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆದ ಸ್ಥಳದಲ್ಲಿ ಫೋಟೋಗ್ರಾಫರ್‌ಗಳು ಸೆರೆಹಿಡಿದ ಫೋಟೋಗಳನ್ನು ಸಂಗ್ರಹಿಸುತ್ತಿರುವುದಾಗಿ ದಿಲ್ಲಿ ಪೊಲೀಸರು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಹೀಗೆ ಮಾಡುವಲ್ಲಿ ಎಸಿಪಿ ಹೃದಯ್ ಭೂಷಣ್ ಮತ್ತು ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ವಿಫಲವಾಗಿದ್ದಾರೆ ಎಂದು ನ್ಯಾಯಾಲಯ ತರಾಟೆಗೆತ್ತಿಕೊಂಡಿರುವುದಾಗಿ ನ್ಯಾಯಾಲಯದ ಕಲಾಪದ ಪ್ರತಿಯನ್ನು ಉಲ್ಲೇಖಿಸಿ ‘scroll.in’ ವರದಿ ಮಾಡಿದೆ.

 ಸಂಬಂಧಿತ ವೀಡಿಯೊ ದೃಶ್ಯಾವಳಿಗಳನ್ನು ಜೋಪಾನವಾಗಿ ಇಡುವಂತೆ ಮೆಟ್ರೋ ರೈಲು ನಿಲ್ದಾಣಗಳ ಅಧಿಕಾರಿಗಳಿಗೆ ನೋಟಿಸ್/ಮನವಿ ಜಾರಿಗೊಳಿಸಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿಲ್ಲ. ಯಾವ ದಾಖಲೆಯನ್ನು ಹೇಗೆ ಸಂಗ್ರಹಿಸಬೇಕು ಎಂದು ಪೊಲೀಸರಿಗೆ ಹೇಳುವುದು ನ್ಯಾಯಾಲಯದ ಕೆಲಸವಲ್ಲ. ಸಂಬಂಧಿತ ವೀಡಿಯೊ ದೃಶ್ಯದ ತುಣುಕು ಸಂಗ್ರಹಿಸುವಲ್ಲಿ ಪೊಲೀಸರು ತೋರಿರುವ ಅಸಡ್ಡೆ ಆತಂಕಕಾರಿಯಾಗಿದೆ ಎಂದು ನ್ಯಾಯಾಲಯ ಅಸಮಾಧಾನ ಸೂಚಿಸಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News