ಕಫೀಲ್ ಖಾನ್ ಬಿಡುಗಡೆಗೆ ಆಗ್ರಹಿಸಿ ಕಾಂಗ್ರೆಸ್ ನಿಂದ ಸಹಿ ಚಳವಳಿ, ಉಪವಾಸ ಧರಣಿ

Update: 2020-07-26 11:38 GMT

ಹೊಸದಿಲ್ಲಿ: ಗೋರಖ್‍ಪುರದ ವೈದ್ಯ ಡಾ.ಕಫೀಲ್ ಖಾನ್ ಬಿಡುಗಡೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ನಿರಂತರ ಹೋರಾಟದ ಅಭಿಯಾನ ಆರಂಭಿಸಿದೆ. ಸಹಿ ಚಳವಳಿ, ಉಪವಾಸ ಧರಣಿ, ಸಾಮಾಜಿಕ ಜಾಲತಾಣ ಅಭಿಯಾನ ಮತ್ತು ದರ್ಗಾಗಳಿಗೆ ಭೇಟಿ ಈ ಅಭಿಯಾನದಲ್ಲಿ ಸೇರಿದೆ.

ಅಲೀಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಕಳೆದ ಡಿಸೆಂಬರ್ ‍ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಖಾನ್ ಅವರನ್ನು ಜನವರಿ 29ರಂದು ಬಂಧಿಸಲಾಗಿತ್ತು.

“ಸಿಎಎ- ಎನ್‍ಆರ್‍ ಸಿ ನೆಪದಲ್ಲಿ ಪೊಲೀಸರು ಮುಸ್ಲಿಮರನ್ನು ಬಂಧಿಸುತ್ತಿದ್ದಾರೆ. ಡಾ.ಕಫೀಲ್ ಖಾನ್ ಅವರ ಬಂಧನದ ವಿರುದ್ಧ ನಾವು ಉಗ್ರ ಹೋರಾಟ ನಡೆಸಲು ನಿರ್ಧರಿಸಿದ್ದೇವೆ” ಎಂದು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ರಾಷ್ಟ್ರೀಯ ಸಂಯೋಜಕ ಮಿನ್ನತ್ ರಹಮಾನಿ ಹೇಳಿದ್ದಾರೆ. ಖಾನ್ ಬಿಡುಗಡೆಗೆ ಅಗ್ರಹಿಸಿ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಸಹಿ ಅಭಿಯಾನವನ್ನು ಅಲ್ಪಸಂಖ್ಯಾತರ ಘಟಕ ಆರಂಭಿಸಿದೆ.

ಮೀರತ್, ಮುಜಾಫರ್‍ ನಗರ ಮತ್ತು ಸಂಭಾಲ್ ಸೇರಿದಂತೆ ಮುಸ್ಲಿಂ ಬಾಹುಳ್ಯವಿರುವ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News