ಆಲಿಬಾಬಾ ಕಂಪೆನಿ, ಜ್ಯಾಕ್ ಮಾಗೆ ಗುರ್ಗಾಂವ್ ನ್ಯಾಯಾಲಯ ಸಮನ್ಸ್

Update: 2020-07-26 13:43 GMT

ಚಂಡೀಗಢ, ಜು.26: ಇ-ಕಾಮರ್ಸ್ ಸಂಸ್ಥೆ ಆಲಿಬಾಬಾದ ಆ್ಯಪ್‌ನಲ್ಲಿ ಚೀನಾವನ್ನು ಟೀಕಿಸುವ ವಿಷಯಗಳನ್ನು ಸೆನ್ಸರ್ ಮಾಡಲಾಗುತ್ತಿದೆ ಮತ್ತು ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಮಾಜಿ ಉದ್ಯೋಗಿ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಆಲಿಬಾಬಾ ಮತ್ತು ಅದರ ಸಂಸ್ಥಾಪಕ ಜಾಕ್ ಮಾ ವಿರುದ್ಧ ಹರ್ಯಾಣ ಗುರುಗ್ರಾಮದ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ ಎಂದು ಸುದ್ಧಿಸಂಸ್ಥೆ ‘ರಾಯ್ಟರ್ಸ್’ ರವಿವಾರ ವರದಿ ಮಾಡಿದೆ.

ಆಲಿಬಾಬಾ ಸಂಸ್ಥೆಯ ಆ್ಯಪ್‌ಗಳಾದ ಯುಸಿ ಬ್ರೌಸರ್ ಮತ್ತು ಯುಸಿ ನ್ಯೂಸ್‌ಗಳ ಗುರುಗ್ರಾಮ ಕಚೇರಿಯಲ್ಲಿ 2017ರ ಅಕ್ಟೋಬರ್‌ವರೆಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಪುಷ್ಪೇಂದ್ರ ಸಿಂಗ್ ಪರ್ಮಾರ್ ಈ ದೂರು ಸಲ್ಲಿಸಿದ್ದಾರೆ. ಸುದ್ದಿಗಳ ಸೆನ್ಸರ್‌ಶಿಪ್ ಮತ್ತು ರಾಜಕೀಯ ಹಾಗೂ ಸಾಮಾಜಿಕ ಗೊಂದಲಕ್ಕೆ ಕಾರಣವಾಗುವ ಸುಳ್ಳು ಸುದ್ದಿ ಪ್ರಸಾರ ಮಾಡುವುದನ್ನು ಆಕ್ಷೇಪಿಸಿದ್ದಕ್ಕೆ ತನ್ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆದ್ದರಿಂದ ತನಗೆ ಸಂಸ್ಥೆಯಿಂದ 2 ಕೋಟಿ ರೂ. ಪರಿಹಾರ ದೊರಕಿಸಿ ಕೊಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

   ಯುಸಿ ಬ್ರೌಸರ್, ಯುಸಿ ನ್ಯೂಸ್ ಸೇರಿದಂತೆ ಚೀನಾದ 59 ಆ್ಯಪ್‌ಗಳನ್ನು ಕೇಂದ್ರ ಸರಕಾರ ನಿಷೇಧಿಸಿದ ಸುಮಾರು 1 ತಿಂಗಳ ಬಳಿಕ ಈ ದೂರು ದಾಖಲಿಸಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಜಾಕ್‌ ಮಾ, ಆಲಿಬಾಬಾಗೆ ಸಮನ್ಸ್ ಜಾರಿಗೊಳಿಸಿದ ಕೋರ್ಟ್, ಜು.29ರಂದು ಖುದ್ದು ಅಥವಾ ಪ್ರತಿನಿಧಿ ಕೋರ್ಟ್‌ನಲ್ಲಿ ಹಾಜರಿರಬೇಕು ಮತ್ತು 30 ದಿನದೊಳಗೆ ಸಂಸ್ಥೆ ಅಥವಾ ಅಧಿಕಾರಿಗಳು ಲಿಖಿತ ಉತ್ತರ ನೀಡಬೇಕು ಎಂದು ಸೂಚಿಸಿದೆ. ಭಾರತದ ಮಾರುಕಟ್ಟೆಯ ಬಗ್ಗೆ ಮತ್ತು ಸಂಸ್ಥೆಯ ಸ್ಥಳೀಯ ಸಿಬ್ಬಂದಿಯ ಹಿತಚಿಂತನೆಯ ಕುರಿತ ತನ್ನ ಬದ್ಧತೆ ಅಚಲವಾಗಿದೆ ಮತ್ತು ಸಂಸ್ಥೆಯ ಕಾರ್ಯನೀತಿ ಸ್ಥಳೀಯ ನಿಯಮಗಳಿಗೆ ಅನುಗುಣವಾಗಿದೆ. ಈಗ ನಡೆಯುತ್ತಿರುವ ದಾವೆಗಳ ಕುರಿತು ಪ್ರತಿಕ್ರಿಯಿಸಲು ಅಶಕ್ತನಾಗಿದ್ದೇನೆ ಎಂದು ಯುಸಿ ಇಂಡಿಯಾ ಪ್ರತಿಕ್ರಿಯಿಸಿದೆ.

2000 ರೂ. ನೋಟ್ ಬ್ಯಾನ್ ಎಂಬ ಸುಳ್ಳು ಸುದ್ಧಿ

ಇವತ್ತು ಮಧ್ಯರಾತ್ರಿಯಿಂದ 2000 ರೂ. ನೋಟುಗಳನ್ನು ನಿಷೇಧಿಸಲಾಗಿದೆ ಎಂದು 2017ರಲ್ಲಿ ಯುಸಿ ನ್ಯೂಸ್ ವೆಬ್‌ಸೈಟ್‌ನಲ್ಲಿ ಸುದ್ಧಿ ಪ್ರಸಾರವಾಗಿತ್ತು. 2018ರಲ್ಲಿ ಪ್ರಸಾರವಾದ ಇನ್ನೊಂದು ಸುದ್ಧಿಯಲ್ಲಿ ‘ ಈಗಷ್ಟೇ ಭಾರತ- ಪಾಕ್ ಮಧ್ಯೆ ಯುದ್ಧ ಆರಂಭವಾಗಿದೆ’ ಎಂದು ತಿಳಿಸಿರುವುದನ್ನು ಸುದ್ಧಿ ಸಂಸ್ಥೆ ‘ರಾಯ್ಟರ್ಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News