ಸತತ 4ನೇ ದಿನ 45,000ಕ್ಕೂ ಅಧಿಕ ಪ್ರಕರಣ

Update: 2020-07-26 13:46 GMT

ಹೊಸದಿಲ್ಲಿ, ಜು.26: ದೇಶದಲ್ಲಿ ರವಿವಾರ ಬೆಳಗ್ಗಿನವರೆಗಿನ 24 ಗಂಟೆಗಳಲ್ಲಿ 48,661 ಹೊಸ ಪ್ರಕರಣ ದಾಖಲಾಗುವುದರೊಂದಿಗೆ ಕೊರೋನ ಸೋಂಕಿತರ ಸಂಖ್ಯೆ 13,85,522ಕ್ಕೇರಿದೆ. ಸತತ ನಾಲ್ಕನೇ ದಿನವೂ ಒಂದೇ ದಿನ 45,000ಕ್ಕೂ ಅಧಿಕ ಸೋಂಕು ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಕೊರೋನದಿಂದ ಸಾವನ್ನಪ್ಪಿರುವ ಸಂಖ್ಯೆ 32,063ಕ್ಕೇರಿದ್ದರೆ ಒಟ್ಟು 8,85,577 ಜನ ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣ 63.91%ಕ್ಕೆ ಹೆಚ್ಚಿದೆ. ಮಹಾರಾಷ್ಟ್ರದಲ್ಲಿ ಶನಿವಾರ 9,251 ಹೊಸ ಪ್ರಕರಣ ದಾಖಲಾಗಿದ್ದು ಸೋಂಕಿತರ ಸಂಖ್ಯೆ 3,66,368ಕ್ಕೇರಿದೆ. ಮೃತರ ಸಂಖ್ಯೆ 13,389ಕ್ಕೆ ತಲುಪಿದ್ದು 2,07,194 ಜನ ಚೇತರಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಶನಿವಾರ 5,000ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣ ದಾಖಲಾಗುವುದರೊಂದಿಗೆ ಸೋಂಕಿತರ ಸಂಖ್ಯೆ 90,000ವನ್ನು ದಾಟಿದೆ. ದಿಲ್ಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಹೇಳಿದ್ದಾರೆ. ಕೇರಳದಲ್ಲಿ ಸೋಂಕಿತರ ಸಂಖ್ಯೆ 18,098ಕ್ಕೆ ತಲುಪಿದ್ದು 1.5 ಲಕ್ಷಕ್ಕೂ ಹೆಚ್ಚು ಜನರ ಮೇಲೆ ನಿಗಾ ವಹಿಸಲಾಗಿದೆ. ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷ ಗಡಿಯನ್ನು ದಾಟಿದೆ (2,06,737) . ಗುಜರಾತ್‌ನಲ್ಲಿ ಸೋಂಕಿತರ ಸಂಖ್ಯೆ 54,712ಕ್ಕೇರಿದೆ.

ಇಂದು(ಜುಲೈ 27) ಮುಂಬೈಯ ಧಾರಾವಿ ಪ್ರದೇಶದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ಲಾಸ್ಮಾ ದಾನ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸರಕಾರದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News