ಬಸ್ ತಡೆದ ಪೊಲೀಸರು: 6 ಗಂಟೆಗೂ ಅಧಿಕ ಕಾಲ ಆಹಾರ, ನೀರು ಇಲ್ಲದೆ ಪರದಾಡಿದ ವಲಸೆ ಕಾರ್ಮಿಕರು

Update: 2020-07-26 13:59 GMT

ಕೋಲ್ಕತಾ, ಜು. 26: ಗೋವಾದಿಂದ ಹಿಂದಿರುಗಿದ ವಲಸೆ ಕಾರ್ಮಿಕರಿಂದ ತುಂಬಿದ್ದ ಬಸ್ಸೊಂದು ಶನಿವಾರ ಪಶ್ಚಿಮಬಂಗಾಳ ಪ್ರವೇಶಿಸಿತು. ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಹರಡುತ್ತಿರುವ ಕಾರಣಕ್ಕೆ ಲಾಕ್‌ಡೌನ್ ಮಾಡಿದ ಬಗ್ಗೆ ಮಾಹಿತಿ ಇಲ್ಲದ ವಲಸೆ ಕಾರ್ಮಿಕರು ಕೋಲ್ಕತಾದ ವಿಐಪಿ ರಸ್ತೆ ತಲುಪುತ್ತಿದ್ದಂತೆ ಪೊಲೀಸರು ಬಸ್ ಅನ್ನು ತಡೆದು ನಿಲ್ಲಿಸಿದ್ದಾರೆ.

ಗೋವಾದಿಂದ 29 ಮಂದಿ ವಲಸೆ ಕಾರ್ಮಿಕರು ಮಂಗಳವಾರ ಪ್ರಯಾಣ ಆರಂಭಿಸಿದ್ದರು. ಅವರು ಪಶ್ಚಿಮಬಂಗಾಳದ ಸಂದೇಶ್‌ಖಾಲಿಯ ಧಾಮ್‌ಖಾಲಿ ಪ್ರದೇಶದ ಊರಿಗೆ ತೆರಳುತ್ತಿದ್ದರು. ಅಲ್ಲದೆ ತಮ್ಮ ಹೇಳಿಕೆಯನ್ನು ಸಾಬೀತುಪಡಿಸುವ ಎಲ್ಲ ದಾಖಲೆಗಳು ವಲಸೆ ಕಾರ್ಮಿಕರಲ್ಲಿ ಇದ್ದುವು. ಲಾಕ್‌ಡೌನ್ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಬಿಧಾನ್ ನಗರದ ಪೊಲೀಸ್ ಸಿಬ್ಬಂದಿ ಬೆಳಗ್ಗೆ 8 ಗಂಟೆಗೆ ವಲಸೆ ಕಾರ್ಮಿಕರಿದ್ದ ಬಸ್ ಅನ್ನು ನಿಲ್ಲಿಸಿದ್ದಾರೆ. ಲಾಕ್‌ಡೌನ್ ಮುಗಿಯುವವರೆಗೆ ಬಸ್ಸಿನಲ್ಲೇ ಕಾಯುವಂತೆ ಈ ಕಾರ್ಮಿಕರಿಗೆ ಸೂಚನೆ ನೀಡಲಾಗಿತ್ತು. ಈ ಸಂದರ್ಭ 6 ಗಂಟೆಗಳ ಕಾಲ ಕಾರ್ಮಿಕರಿಗೆ ಆಹಾರ ಹಾಗೂ ನೀರು ಒದಗಿಸಿಲ್ಲ ಎಂದು ಆರೋಪಿಸಲಾಗಿದೆ.

ಕಾರ್ಮಿಕರು ಮನವಿ ಮಾಡಿದ ಹೊರತಾಗಿಯೂ ಲಾಕ್‌ಡೌನ್ ಮುಗಿಯುವವರೆಗೆ ಕಾಯುವಂತೆ ಹೇಳಲಾಯಿತು. 6 ಗಂಟೆಗಳ ಬಳಿಕ ಪೊಲೀಸರು ಹಾಗೂ ಸ್ಥಳೀಯರು ಕಾರ್ಮಿಕರಿಗೆ ನೀರು ಹಾಗೂ ಆಹಾರದ ವ್ಯವಸ್ಥೆ ಮಾಡಿದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News