ಉತ್ತರಪ್ರದೇಶ: ಏಟಾ ಜೈಲಿನ 36 ಕೈದಿಗಳಿಗೆ ಕೊರೋನ ಸೋಂಕು

Update: 2020-07-26 14:10 GMT

ಏಟಾ (ಉತ್ತರಪ್ರದೇಶ), ಜು. 26: ಉತ್ತರಪ್ರದೇಶದ ಏಟಾ ಜಿಲ್ಲಾ ಕಾರಾಗೃಹದ 36ಕ್ಕೂ ಅಧಿಕ ಕೈದಿಗಳಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ಕಾರಾಗೃಹ ಆಡಳಿತ ಇಲ್ಲಿನ ಶಾಲೆಯಲ್ಲಿ ತಾತ್ಕಾಲಿಕ ಕಾರಾಗೃಹದ ವ್ಯವಸ್ಥೆ ಮಾಡಿದೆ ಎಂದು ಜೈಲರ್ ಕುಲದೀಪ್ ಸಿಂಗ್ ಭದುರಿಯಾ ತಿಳಿಸಿದ್ದಾರೆ.

‘‘ಆಗ್ರಾದ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜಿನಿಂದ ಸ್ವೀಕರಿಸಲಾದ ವರದಿಯ ಆಧಾರದಿಂದ ಹೇಳುವುದಾದರೆ, ಏಟಾ ಜಿಲ್ಲಾ ಕಾರಾಗೃಹದಲ್ಲಿ 36 ಮಂದಿ ಕೈದಿಗಳು ಕೊರೋನ ಸೋಕಿಗೆ ತುತ್ತಾಗಿದ್ದಾರೆ.’’ ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಅಜಯ್ ಅಗರ್ವಾಲ್ ತಿಳಿಸಿದ್ದಾರೆ. ಆಡಳಿತಾಧಿಕಾರಿ ಹಾಗೂ ಉಪ ಜೈಲರ್ ಅವರನ್ನು ತಾತ್ಕಾಲಿಕ ಕಾರಾಗೃಹಕ್ಕೆ ನಿಯೋಜಿಸಲಾಗದೆ ಎಂದು ಭದುರಿಯಾ ಹೇಳಿದ್ದಾರೆ.

‘‘ಕೈದಿಗಳನ್ನು ಕಾರಾಗೃಹಕ್ಕೆ ನೇರವಾಗಿ ಕಳುಹಿಸುವ ಬದಲು ತಾತ್ಕಾಲಿಕ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅವರಿಗೆ ಕೊರೋನ ಪರೀಕ್ಷೆ ನಡೆಸಲಾಗುತ್ತದೆ. ಅವರಲ್ಲಿ ಕೊರೋನ ಲಕ್ಷಣ ಕಾಣಿಸಿಕೊಂಡರೆ ಎಲ್ 1 ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತದೆ. ಅವರು ಗುಣಮುಖರಾದ ಬಳಿಕ ಜೈಲು ಪ್ರವೇಶಿಸಬಹುದು’’ ಎಂದು ಭದುರಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News