ಕೃಷ್ಣಾಪುರ: 6 ಜುಮಾ ಮಸೀದಿಗಳಲ್ಲಿ ಜುಲೈ 30ರಿಂದ ನಮಾಝ್ ಪ್ರಾರಂಭ

Update: 2020-07-27 04:31 GMT

ಕೃಷ್ಣಾಪುರ, ಜು.27: ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ (ರಿ), ಕೃಷ್ಣಾಪುರ ಮತ್ತು ಇದರ ಅಧೀನದಲ್ಲಿರುವ ಜುಮಾ ಮಸೀದಿಗಳ ದೈನಂದಿನ ನಮಾಝ್ ಮತ್ತು ಜುಮಾ ನಮಾಝ್ ಪ್ರಾರಂಭದ ಕುರಿತು ಜಮಾಅತಿನ ಸಂಯುಕ್ತ ಖಾಝಿ ಅಲ್ ಹಾಜ್ ಇ.ಕೆ. ಇಬ್ರಾಹಿಂ ಮುಸ್ಲಿಯಾರ್ ಮತ್ತು ಅಧ್ಯಕ್ಷ ಹಾಜಿ ಬಿ.ಎಂ ಮುಮ್ತಾಜ್ ಆಲಿ ಅವರು ಪ್ರಕಟಣೆ ಹೊರಡಿಸಿದ್ದಾರೆ.

ಕೊರೋನ ಸಾಂಕ್ರಾಮಿಕ ಹಿನ್ನೆಲೆ ಮಾ.22ರಿಂದ ಜಮಾಅತ್ ಅಧೀನದ 6 ಜುಮಾ ಮಸೀದಿಗಳನ್ನು ಮುಚ್ಚಲಾಗಿತ್ತು. ಇದೀಗ ಜು.24ರಂದು ಜುಮಾ ಮಸೀದಿ ಮುಸ್ಲಿಂ ಜಮಾಅತ್ ಆಡಳಿತ ಸಮಿತಿಯು ಸಭೆ ನಡೆಸಿ ಜು.30ರಂದು ಗುರುವಾರ ಸುಬುಹಿ ನಮಾಝ್ ನೊಂದಿಗೆ 6 ಜುಮಾ ಮಸೀದಿಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.

ನಿಬಂಧನೆಗಳು/ಮುನ್ನೆಚ್ಚರಿಕಾ ಕ್ರಮಗಳು

1. ಇಮಾಮರೊಂದಿಗೆ ಜಮಾಅತ್ ಆಗಿ ಮಾತ್ರ ನಮಾಝ್ ನಿರ್ವಹಿಸಲು ಮಸೀದಿಯಲ್ಲಿ ಅವಕಾಶವಿರುತ್ತದೆ.

2. ಬಾಂಗ್ (ಆಝಾನ್) ಆಗುವ 5 ನಿಮಿಷಗಳ ಮುಂಚಿತವಾಗಿ ಮಸೀದಿಗಳನ್ನು ತೆರೆಯಲಾಗುವುದು, ಬಾಂಗ್ ಆದ 10 ನಿಮಿಷಗಳ ನಂತರ ನಮಾಝ್  ಪ್ರಾರಂಭಿಸಲಾಗುವುದು. ದುಆ ಬಳಿಕ ಮಸೀದಿ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಸುನ್ನತ್ ನಮಾಝ್, ಕುರ್ ಆನ್ ಪಾರಾಯಣ ಮತ್ತು ಇತರ ಆರಾಧನೆಗಳನ್ನು ಮಾಡಲು ಅವಕಾಶವಿಲ್ಲ.

3. ಮಸೀದಿ ಹೌಲ್, ಪೈಪ್ ಹಾಗೂ ಶೌಚಾಲಯಗಳು ಮುಚ್ಚಲಾಗುವುದು. ಆದುದರಿಂದ ಮನೆಯಲ್ಲೇ ವುಳೂ (ಅಂಗಸ್ನಾನ) ಮಾಡಿ ಬರಬೇಕು.

4, ಮಸೀದಿಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಚಾಪೆ/ಮುಸಲ್ಲಾ ಗಳನ್ನು ಕಡ್ಡಾಯವಾಗಿ ತರಬೇಕು, ಕೈಗಳನ್ನು ಹ್ಯಾಂಡ್ ವಾಶ್ ಮೂಲಕ ಸ್ವಚ್ಛಗೊಳಿಸಬೇಕು.

5, ಮಸೀದಿ ಒಳಗೆ ನಮಾಝ್ ಮಾಡುವಾಗ ಕನಿಷ್ಠ 1 ಮೀಟರ್ ಅಂತರ ಪಾಲಿಸಬೇಕು ಮತ್ತು ಗುರುತು ಹಾಕಿದ ಸ್ಥಳದಲ್ಲಿ ಮಾತ್ರ ಮುಸಲ್ಲಾ ಹಾಕಬೇಕು.

6. ಶುಕ್ರವಾರ ಜುಮಾ ದಿವಸ ಮಧ್ಯಾಹ್ನ ಗಂಟೆ 12.30ಕ್ಕೆ ಮಸೀದಿಯನ್ನು ತೆರೆಯಲಾಗುವುದು, ಜಮಾಅತಿನ ಅಧೀನದಲ್ಲಿರುವ ಎಲ್ಲಾ ಮಸೀದಿಗಳಲ್ಲಿ ಮಧ್ಯಾಹ್ನ 1 ಗಂಟೆಗೆ ಖುತುಬ ನಿರ್ವಹಿಸಲಾಗುವುದು. ನಮಾಝ್ ದುಆ ಆದ ನಂತರ ಮಸೀದಿಯಿಂದ ನಿರ್ಗಮಿಸಬೇಕು. ಸುನ್ನತ್ ನಮಾಝ್ ಮತ್ತು ಉಪನ್ಯಾಸಗಳಿಗೆ ಅವಕಾಶವಿರುವುದಿಲ್ಲ.

7. 60 ವರ್ಷ ಮೇಲಿನವರು ಹಾಗೂ 10 ವರ್ಷದ ಪ್ರಾಯಕ್ಕಿಂತ ಕೆಳಗಿನವರು ಆರೋಗ್ಯದ ರಕ್ಷಣೆಯ ಹಿತದೃಷ್ಟಿಯಿಂದ ಮನೆಯಲ್ಲಿಯೇ ನಮಾಝ್ ನಿರ್ವಹಿಸುವುದು ಉತ್ತಮವೆಂದು ಸರಕಾರದ ನಿರ್ದೇಶನ ಇರುತ್ತದೆ.

8. ಮಸೀದಿ ಒಳಗೆ ಮತ್ತು ಹೊರಗೆ ಪರಸ್ಪರ ಹಸ್ತಲಾಘವ ಮತ್ತು ಆಲಿಂಗನ ಮಾಡಬಾರದು

ಈದ್ ನಮಾಝ್ ಬಗ್ಗೆ ವಿಶೇಷ ಸೂಚನೆ

ಕರ್ನಾಟಕ ಸರಕಾರದ ವಕ್ಫ್ ಇಲಾಖೆಯ ಆದೇಶದಂತ ಬಕ್ರೀದ್ ನಮಾಝನ್ನು ಮಸೀದಿಗಳಲ್ಲಿ ನಿರ್ವಹಿಸಲು ಅನುಮತಿ ನೀಡಿರುತ್ತಾರೆ. ಅದರಂತೆ ಜಮಾಅತ್ ಅಧೀನದಲ್ಲಿರುವ 6 ಮಸೀದಿಗಳಲ್ಲಿ ಬಕ್ರೀದ್ ನಮಾಝ್ ಹಾಗೂ ಖುತುಬವನ್ನು ನಿರ್ವಹಿಸಲು ನಿರ್ಧರಿಸಲಾಗಿದೆ. ಎಲ್ಲಾ ಮಸೀದಿಗಳಲ್ಲಿ ಬೆಳಗ್ಗೆ 7.30ಕ್ಕೆ ಬಕ್ರೀದ್ ನಮಾಜನ್ನು ನಡೆಸಲಾಗುವುದು, ಬೆಳಗ್ಗೆ 7.00 ಗಂಟೆಯಿಂದ ಮಸೀದಿಯನ್ನು ತೆರೆಯಲಾಗುವುದು ಮತ್ತು ಖುತುಬ ಆದ ಕೂಡಲೇ ಮಸೀದಿ ಬಾಗಿಲನ್ನು ಮುಚ್ಚಲಾಗುವುದು. ಜಮಾಅತಿನ ಸದಸ್ಯರೆಲ್ಲರೂ ಸಹಕಾರ ನೀಡಬೇಕು ಎಂದು ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ ಅಧ್ಯಕ್ಷ ಹಾಜಿ ಬಿ.ಎಂ. ಮುಮ್ತಾಜ್ ಆಲಿ ಮತ್ತು ಆಡಳಿತ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News