ಪೌರಕಾರ್ಮಿಕರಿಗೆ ವಿತರಿಸಿದ್ದ ನಿವೇಶನ ಅಕ್ರಮ ಪರಭಾರೆ: ಆರೋಪ

Update: 2020-07-27 13:36 GMT

ಮಂಗಳೂರು, ಜು.27: ಮಂಗಳೂರು ಮಹಾನಗರ ಪಾಲಿಕೆಯ ಪಚ್ಚನಾಡಿಯಲ್ಲಿ ಪೌರಕಾರ್ಮಿಕರಿಗೆ ವಿತರಿಸಲಾಗಿದ್ದ ನಿವೇಶನಗಳನ್ನು ಸ್ಥಳೀಯ ಪ್ರಭಾವಿಯೊಬ್ಬರು ಅಕ್ರಮವಾಗಿ ಪರಭಾರೆ ಮಾಡಿದ್ದಾಗಿ ಆರೋಪಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ದ.ಕ. ಜಿಲ್ಲಾ ಪೌರಕಾರ್ಮಿಕರ ಹಾಗೂ ‘ಡಿ’ ದರ್ಜೆಯ ನೌಕರರ ಸಂಘವು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಮನವಿ ಸಲ್ಲಿಸಿದೆ.

‘ಪಚ್ಚನಾಡಿ ಗ್ರಾಮದ ಸರ್ವೇ ನಂ. 139/1ಎ ಪೈಕಿ ನಾಲ್ಕು ಎಕರೆ ಜಾಗವನ್ನು 1989ರಲ್ಲಿ ಅಳತೆ ಮಾಡಿ, 200 ನಿವೇಶನಗಳನ್ನಾಗಿ ಮಾರ್ಪಡಿಸಲಾಗಿತ್ತು. ಪರಿಶಿಷ್ಟ ಜಾತಿಯವರನ್ನೊಳಗೊಂಡಂತೆ ಇತರ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು’ ಎಂದು ದ.ಕ. ಜಿಲ್ಲಾ ಪೌರಕಾರ್ಮಿಕರ ಹಾಗೂ ನಾಲ್ಕನೇ (ಡಿ) ದರ್ಜೆಯ ನೌಕರರ ಸಂಘದ ಅಧ್ಯಕ್ಷ ಅನಿಲ್‌ಕುಮಾರ್ ಮನವಿಯಲ್ಲಿ ತಿಳಿಸಿದ್ದಾರೆ.

‘ಇದರಲ್ಲಿ ಹೆಚ್ಚಿನ ಕಾರ್ಮಿಕರು ನಿವೃತ್ತಿಯಾದ ನಂತರ ನಿರ್ದಿಷ್ಟ ಜಾಗದಲ್ಲಿ ಮನೆ ಕಟ್ಟಿಸಿಕೊಳ್ಳುವ ಉದ್ದೇಶದಿಂದ ನಿವೇಶನಗಳನ್ನು ಖಾಲಿ ಬಿಟ್ಟಿದ್ದರು. 200ರ ಪೈಕಿ 17 ಮಂದಿ ಮಾತ್ರ ಅಲ್ಲಿ ಮನೆ ಕಟ್ಟಿಸಿಕೊಂಡು ವಾಸಿಸುತ್ತಿದ್ದಾರೆ. ಉಳಿದ ನಿವೇಶನಗಳ ಜಾಗದಲ್ಲಿ ಬೆಲೆಬಾಳುವ ಮರಗಳಿದ್ದವು. ಈ ಜಮೀನಿನಲ್ಲಿ ಅನ್ಯರಿಗೆ ಯಾವುದೇ ಹಕ್ಕು ಇರುವುದಿಲ್ಲ. ಅದು ಕೇವಲ ಪೌರಕಾರ್ಮಿಕರಿಗಷ್ಟೇ ಮೀಸಲಾದ ಸ್ಥಳ’ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

‘ಇತ್ತೀಚೆಗೆ ಸ್ಥಳೀಯ ಪ್ರಭಾವಿಯೊಬ್ಬರು ಖಾಲಿ ನಿವೇಶನಗಳನ್ನು ಹಾಗೂ ಮರಮಟ್ಟುಗಳನ್ನು ನೆಲಸಮ ಮಾಡಿದ್ದಾರೆ. ಲಕ್ಷಾಂತರ ರೂ. ಪಡೆದು ತಮಗೆ ಬೇಕಾದವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ್ದಾರೆ. ಕೆಲವರು ಪಾಲಿಕೆ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರವಾನಿಗೆ ಪಡೆಯದೆಯೇ ಪಂಚಾಗ ಹಾಕಿ, ಮನೆಯ ಸುತ್ತಮುತ್ತ ಆವರಣ ಗೋಡೆ ನಿರ್ಮಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

‘ಪೌರಕಾರ್ಮಿಕರಿಗೆ ವಿತರಿಸಲಾಗಿದ್ದ ನಿವೇಶನಗಳಲ್ಲಿದ್ದ ಬೃಹದಾಕಾರದ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದಿಲ್ಲ. ಅಕ್ರಮವಾಗಿ ಹಾಕಿರುವ ಮನೆಯ ಪಂಚಾಂಗ ತೆರವುಗೊಳಿಸದಿದ್ದಲ್ಲಿ ಪೌರಕಾರ್ಮಿಕರಿಗೆ ಅನ್ಯಾಯವಾಗಲಿದೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪೌರಕಾರ್ಮಿಕರ ಹಾಗೂ ‘ಡಿ’ ದರ್ಜೆಯ ನೌಕರರ ಸಂಘದ ಅಧ್ಯಕ್ಷ ಅನಿಲ್‌ಕುಮಾರ್ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News