ಇಂದು ಸಂಪುಟ ಸಭೆ ಕರೆದ ಅಶೋಕ್ ಗೆಹ್ಲೋಟ್
ಜೈಪುರ, ಜು.28: ರಾಜ್ಯ ವಿಧಾನಸಭೆಯ ಅಧಿವೇಶನ ನಡೆಸಲು ರಾಜ್ಯಪಾಲ ಕಲರಾಜ್ ಮಿಶ್ರಾ ಎತ್ತಿರುವ ಅಂಶಗಳ ಕುರಿತು ಚರ್ಚೆ ನಡೆಸಲು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು ಸಂಪುಟ ಸಭೆ ಕರೆದಿದ್ದಾರೆ.
ಅಧಿವೇಶನವನ್ನು ಕರೆಯಲೇಬೇಕೆಂದು ಕಾಂಗ್ರೆಸ್ ಸರಕಾರ ರಾಜ್ಯಪಾಲ ಮಿಶ್ರಾಗೆ ನಿರಂತರವಾಗಿ ಬೇಡಿಕೆ ಇಡುತ್ತಾ ಬಂದಿದೆ. ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ 18 ಶಾಸಕರೊಂದಿಗೆ ಬಂಡಾಯ ಎದ್ದಿರುವ ಕಾರಣ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ತನ್ನ ಸರಕಾರಕ್ಕೆ ಬಹುಮತವಿದೆ ಎಂದು ತೋರಿಸಲು ಗೆಹ್ಲೋಟ್ ಸದನದಲ್ಲಿ ಶಕ್ತಿ ಪ್ರದರ್ಶಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಗೆಹ್ಲೋಟ್‌ಗೆ ಪತ್ರ ಬರೆದಿದ್ದ ರಾಜ್ಯಪಾಲ ಕಲರಾಜ್ ಮಿಶ್ರಾ ಅಧಿವೇಶನ ಕರೆಯುವುದಕ್ಕೆ ನನ್ನ ವಿರೋಧವಿಲ್ಲ ಎಂದು ಹೇಳಿದ್ದರು. ಅಧಿವೇಶನ ನಡೆಸುವಂತೆ ಕೋರಿ ಗೆಹ್ಲೋಟ್ ಎರಡನೇ ಬಾರಿ ಸಲ್ಲಿಸಿದ್ದ ಮನವಿಯನ್ನು ವಾಪಸ್ ಕಳುಹಿಸಿದ್ದ ರಾಜ್ಯಪಾಲರು ಮೂರು ಪ್ರಶ್ನೆಗಳನ್ನು ಕೇಳಿದ್ದರು.