ಚೆನ್ನೈ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ: ತಮಿಳು ನಟನ ಬಂಧನ
Update: 2020-07-28 12:17 IST
ಚೆನ್ನೈ, ಜು.28: ನಗರದ ನುಂಗಂಬಕ್ಕಂ ಪ್ರದೇಶದಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟದ ಚಟುವಟಿಕೆಯಲ್ಲಿ ತೊಡಗಿದ್ದ ತಮಿಳಿನ ಖ್ಯಾತ ನಟ ಶ್ಯಾಮ್ ಸಹಿತ 12 ಮಂದಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ನಟ ಶ್ಯಾಮ್ ಒಡೆತನದ ಫ್ಲಾಟ್‌ನಿಂದ ಜೂಜಾಟಕ್ಕೆ ಬಳಸುತ್ತಿದ್ದ ಟೋಕನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಲಾಕ್‌ಡೌನ್ ವೇಳೆ ತಮಿಳಿನ ಇನ್ನೂ ಕೆಲವು ಜನಪ್ರಿಯ ನಟರು ಇಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದರು. ಇನ್ನು ಯಾವ ನಟರು ಬಂಧಿಸಲ್ಪಟ್ಟಿದ್ದಾರೆ ಎಂಬ ಕುರಿತು ಸ್ಪಷ್ಟತೆ ಇಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನಟ ಶ್ಯಾಮ್ ಸಹಿತ ಇತರ 11 ಮಂದಿಯನ್ನು ಬಂಧಿಸಲಾಗಿದೆ. ಟೋಕನ್ ಬಳಕೆಯ ಬಗ್ಗೆ ನಾವು ತನಿಖೆ ನಡೆಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹತಾಶೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದ ಮರುದಿನವೇ ಪೊಲೀಸರು ಜೂಜಾಟದ ಜಾಲವನ್ನು ಬೇಧಿಸಿದ್ದಾರೆ.