ಅಶೋಕ್ ಗೆಹ್ಲೋಟ್‍ ಗೆ ತಕ್ಕ ಪಾಠ ಕಲಿಸುತ್ತೇವೆ ಎಂದ ಮಾಯಾವತಿ

Update: 2020-07-28 08:22 GMT

ಹೊಸದಿಲ್ಲಿ: ಶಾಸಕರನ್ನು ಕಳವು ಮಾಡಿದ್ದಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‍ ಗೆ ಪಾಠ ಕಲಿಸಲಾಗುವುದು ಎಂದು ಬಹುಜನ್ ಸಮಾಜ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ. ಕಳೆದ ವರ್ಷ ತಮ್ಮ ಪಕ್ಷದ ಆರು ಮಂದಿ ಶಾಸಕರು ಕಾಂಗ್ರೆಸ್ ಪಕ್ಷ ಸೇರಿರುವ ವಿರುದ್ಧ ಸುಪ್ರೀಂ ಕೋರ್ಟ್ ತನಕ ಹೋಗಿ ಹೋರಾಡುವುದಾಗಿ ಆಕೆ ಘೋಷಿಸಿದ್ದಾರೆ.

ಸಚಿನ್ ಪೈಲಟ್ ಅವರ ಬಂಡಾಯದ ನಂತರ ಸದ್ಯ ಅಶೋಕ್ ಗೆಹ್ಲೋಟ್ ಅವರು ರಾಜ್ಯ ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 101ಕ್ಕಿಂತ  ಒಬ್ಬ ಹೆಚ್ಚಿನ ಸದಸ್ಯರ ಬಲ ಹೊಂದಿದ್ದಾರೆ.  ಸೆಪ್ಟೆಂಬರ್ ತಿಂಗಳಲ್ಲಿ ರಾಜಸ್ಥಾನ ಬಿಎಸ್‍ಪಿಯನ್ನು ಕಾಂಗ್ರೆಸ್ ಜತೆಗೆ  ಅದರ ಆರು ಶಾಸಕರು ವಿಲೀನಗೊಳಿಸಿರುವುದರಿಂದಲೇ ಇಂದು ಗೆಹ್ಲೋಟ್‍ ಗೆ ಕನಿಷ್ಠ ಬಹುಮತವಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ಮಾಯಾವತಿ , “ಬಿಎಸ್‍ಪಿ ಈ ಹಿಂದೆಯೂ ನ್ಯಾಯಾಲಯದ ಮೆಟ್ಟಿಲು ಹತ್ತಬಹುದಾಗಿತ್ತಾದರೂ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‍ ಗೆ  ಪಾಠ ಕಲಿಸಲು ಸರಿಯಾದ ಸಮಯಕ್ಕಾಗಿ ನಾವು ಕಾದಿದ್ದೆವು. ಈ ಬೆಳವಣಿಗೆಯನ್ನು ನಾವು ಹಾಗೆಯೇ ಬಿಟ್ಟು ಬಿಡುವುದಿಲ್ಲ. ನಾವು ಸುಪ್ರೀಂ ಕೋರ್ಟ್‍ಗೆ ಬೇಕಾದರೂ ಹೋಗುತ್ತೇವೆ'' ಎಂದು ಮಾಯಾವತಿ ಹೇಳಿದರು.

ತಾನು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೇನೆಂಬ ಕಾಂಗ್ರೆಸ್ ಆರೋಪವನ್ನು ಖಡಾಖಂಡಿತವಾಗಿ ತಿರಸ್ಕರಿಸಿದ  ಮಾಯಾವತಿ , “ರಾಜಸ್ಥಾನದಲ್ಲಿ ಯಾರು ಕಳ್ಳರೆಂದು ಕಾಂಗ್ರೆಸ್ ಹೈಕಮಾಂಡ್ ಗೆ ಕಾಣಿಸುತ್ತಿಲ್ಲವೇ?, ಅವರ ಕಣ್ಣಿಗೆ ಗೆಹ್ಲೋಟ್ ಕಾಣಿಸುತ್ತಿಲ್ಲವೇ?, ಬಿಎಸ್‍ಪಿಯತ್ತ ಬೆರಳು ತೋರಿಸಲು ಅವರಿಗೆ ಸುಲಭ. ನಮಗೆ ಕಾಂಗ್ರೆಸ್‍ ಗೆ ಪಾಠ ಕಲಿಸಬೇಕಿದೆ. ಅವರಿಗೆ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಬೇಕು, ಅದಕ್ಕೆ  ನಮ್ಮನ್ನು ಬಿಜೆಪಿಯ ಕೈಗೊಂಬೆ ಎಂದು ಹೇಳುತ್ತಿದ್ದಾರೆ'' ಎಂದು ಮಾಯಾವತಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News