ರಾಮಮಂದಿರ ಭೂಮಿ ಪೂಜೆ: ಹಲವು ಮುಸ್ಲಿಂ ನಾಯಕರು, ಅಯೋಧ್ಯೆ ಪ್ರಕರಣದ ಅಪೀಲುದಾರ ಅನ್ಸಾರಿಗೆ ಆಹ್ವಾನ

Update: 2020-07-28 09:40 GMT

ಹೊಸದಿಲ್ಲಿ: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಡೆಯುವ ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಲವಾರು ಹಿರಿಯ ಬಿಜೆಪಿ, ಆರೆಸ್ಸೆಸ್ ಹಾಗೂ ವಿಹಿಂಪ ನಾಯಕರಿಗೆ ಮತ್ತು ಕೆಲ ಮುಸ್ಲಿಂ ನಾಯಕರು ಹಾಗೂ ರಾಮ ಜನ್ಮಭೂಮಿ ಪ್ರಕರಣದ ಅಪೀಲುದಾರರಲ್ಲೊಬ್ಬರಿಗೆ ಆಹ್ವಾನ ನೀಡಿದೆ. ಆದರೆ ಯಾವುದೇ ವಿಪಕ್ಷ ನಾಯಕರಿಗೆ ಆಹ್ವಾನ ನೀಡಿಲ್ಲ.

ಬಾಬಾ ರಾಮದೇವ್ ಸಹಿತ ದೇಶದ ವಿವಿಧೆಡೆಗಳಲ್ಲಿರುವ ಸಂತರಿಗೂ ಆಹ್ವಾನ ಹೋಗಿದೆಯಾದರೂ ಒಬ್ಬನೇ ಒಬ್ಬ ವಿಪಕ್ಷ ನಾಯಕನನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಲಿರುವ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ.

ಅಯೋಧ್ಯೆ ಭೂವಿವಾದ ಪ್ರಕರಣದ ಅಪೀಲುದಾರ ಇಕ್ಬಾಲ್ ಅನ್ಸಾರಿ, ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯ ಅಧ್ಯಕ್ಷ ಝಫರ್ ಫಾರೂಖಿ, ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿ ಅಧ್ಯಕ್ಷ ವಾಸಿಂ ರಿಝ್ವಿ, ಹಿರಿಯ ಬಿಜೆಪಿ ನಾಯಕರುಗಳಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್, ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಷಿ ಅವರನ್ನೂ ಆಹ್ವಾನಿಸಲಾಗಿದೆ.

ಆದರೆ ರಾಯ್ ಬರೇಲಿ ಸಂಸದೆಯೂ ಆಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹಿತ ಯಾವುದೇ ವಿಪಕ್ಷ ನಾಯಕರುಗಳನ್ನು ಆಹ್ವಾನಿಸಲಾಗಿಲ್ಲ.

“ವಿವಿಧ ಪಕ್ಷಗಳ ನಡುವೆ ಬೇಧಭಾವ ಬೇಡವೆಂದು ಯಾವುದೇ ರಾಜಕೀಯ ಪಕ್ಷದವರನ್ನು ಆಹ್ವಾನಿಸಿಲ್ಲ. ನಮಗೆ ಆಯ್ಕೆ ಮಾಡಲು ಸಾಧ್ಯವಿಲ್ಲ. ಶ್ರೀ ರಾಮ ಎಲ್ಲರಿಗೂ ಪವಿತ್ರ ದೇವರು. ಆಹ್ವಾನ ದೊರೆಯದ ಎಲ್ಲರೂ ಅವರಿರುವಲ್ಲಿಂದಲೇ ಪ್ರಾರ್ಥನೆ ಸಲ್ಲಿಸಬೇಕೆಂಬುದು ನಮ್ಮ ಮನವಿ'' ಎಂದು ಟ್ರಸ್ಟ್‍ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News