ದುಬೆ ಎನ್‌ಕೌಂಟರ್ ಪ್ರಕರಣ: ತನಿಖಾ ಸಮಿತಿಯಿಂದ ನಿವೃತ್ತ ಡಿಜಿಪಿ, ಮಾಜಿ ನ್ಯಾಯಾಧೀಶರ ಕೈಬಿಡಲು ಸುಪ್ರೀಂ ನಕಾರ
ಹೊಸದಿಲ್ಲಿ, ಜು.28: ಉತ್ತರಪ್ರದೇಶದಲ್ಲಿ ಕುಖ್ಯಾತ ಕ್ರಿಮಿನಲ್ ವಿಕಾಸ್ ದುಬೆ ಎನ್‌ಕೌಂಟರ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ರಚಿಸಲಾಗಿರುವ ಸಮಿತಿಯಿಂದ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಶಶಿಕಾಂತ್ ಅಗರ್ ವಾಲ್ ಮತ್ತು ಉತ್ತರಪ್ರದೇಶದ ನಿವೃತ್ತ ಡಿಜಿಪಿ ಕೆಎಲ್ ಗುಪ್ತಾರನ್ನು ಕೈಬಿಡಲು ಸೂಚಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಎಂಟು ಪೊಲೀಸರ ಹತ್ಯೆ ಹಾಗೂ ಬಳಿಕ ನಡೆದಿದ್ದ ವಿಕಾಸ್ ದುಬೆ ಎನ್‌ಕೌಂಟರ್ ಪ್ರಕರಣದ ತನಿಖೆಗಾಗಿ ನೇಮಿಸಿರುವ ಸಮಿತಿಯ ಕುರಿತ ಕರಡು ಅಧಿಸೂಚನೆಯನ್ನು ಕಳೆದ ವಾರ ಉತ್ತರಪ್ರದೇಶ ಸರಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದು ಇದನ್ನು ಸುಪ್ರೀಂಕೋರ್ಟ್ ಅನುಮೋದಿಸಿತ್ತು. ಸಮಿತಿಯಲ್ಲಿ ಅಗರ್‌ವಾಲ್, ಗುಪ್ತಾರ ಜೊತೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿಎಸ್ ಚೌಹಾಣ್ ಸದಸ್ಯರಾಗಿದ್ದಾರೆ. ದುಬೆಯ ಎನ್‌ಕೌಂಟರ್ ಬಳಿಕ ಟಿವಿ ವಾಹಿನಿಯ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದ ನಿವೃತ್ತ ಡಿಜಿಪಿ ಗುಪ್ತಾ, ಪೊಲೀಸರ ಬಗ್ಗೆ ಸಂದೇಹ ಪಡುವುದು ಸರಿಯಲ್ಲ ಎಂದಿದ್ದರು.
ಈ ಹೇಳಿಕೆಯನ್ನು ಅರ್ಜಿದಾರರು ಉಲ್ಲೇಖಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಎಸ್‌ಎ ಬೋಬ್ಡೆ, ನ್ಯಾಯಾಧೀಶರಾದ ಎಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ನೇತೃತ್ವದ ಪೀಠ, ತನಿಖಾ ಆಯೋಗದ ಸದಸ್ಯರ ಮೇಲೆ ಅಪವಾದ ಹೊರಿಸಲು ಅರ್ಜಿದಾರರಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.