ಮತ್ತೆ ಇಬ್ಬರು ಆರೋಪಿಗಳಿಗೆ ಕೊರೋನ ಸೋಂಕು: ಸಥಂಕುಲಂ ಕಸ್ಟಡಿ ಸಾವು ಪ್ರಕರಣದ ತನಿಖೆಗೆ ಹಿನ್ನಡೆ

Update: 2020-07-28 16:08 GMT

ಮಧುರೈ, ಜು.28: ಸಥಂಕುಲಂ ಕಸ್ಟಡಿ ಸಾವು ಪ್ರಕರಣದ ಮತ್ತೂ ಇಬ್ಬರು ಆರೋಪಿಗಳಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದು ಪ್ರಕರಣದ ತನಿಖೆಗೆ ಹಿನ್ನಡೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದರೊಂದಿಗೆ ಮೂವರು ಆರೋಪಿಗಳು ಹಾಗೂ ಆರು ಸಿಬಿಐ ಅಧಿಕಾರಿಗಳಲ್ಲಿ ಸೊಂಕು ದೃಢಪಟ್ಟಂತಾಗಿದೆ. ಮಧುರೈ ಸೆಂಟ್ರಲ್ ಜೈಲಿನಲ್ಲಿದ್ದ ಒಬ್ಬ ಆರೋಪಿಯಲ್ಲಿ ಜುಲೈ 24ರಂದು ಸೋಂಕು ದೃಢಪಟ್ಟಿತ್ತು. ಜುಲೈ 27ರಂದು ಮತ್ತಿಬ್ಬರು ಆರೋಪಿಗಳಾದ ಹೆಡ್‌ಕಾನ್‌ಸ್ಟೆಬಲ್ ಮುತ್ತುರಾಜ ಮತ್ತು ಮುರುಗನ್ ಪರೀಕ್ಷೆಯ ವರದಿ ಪೊಸಿಟಿವ್ ಬಂದಿದೆ. ಸೋಂಕಿತರನ್ನು ಮಧುರೈಯ ರಾಜಾಜಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ರಾಜ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ ಹಿನ್ನೆಲೆಯಲ್ಲಿ 8 ಸದಸ್ಯರ ಸಿಬಿಐ ತಂಡ ತನಿಖೆ ನಡೆಸಲು ರಾಜ್ಯಕ್ಕೆ ಆಗಮಿಸಿತ್ತು. ಇವರಲ್ಲಿ 6 ಅಧಿಕಾರಿಗಳಿಗೂ ಸೋಂಕು ದೃಢಪಟ್ಟಿದೆ. ಸೋಂಕಿತ ಅಧಿಕಾರಿಗಳನ್ನು ರೈಲ್ವೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ತನಿಖಾ ಅಧಿಕಾರಿಗಳಿಗೂ ಸೋಂಕು ದೃಢಪಟ್ಟಿರುವುದರಿಂದ ಮಧ್ಯಂತರ ವರದಿ ಸಲ್ಲಿಸುವಲ್ಲಿ ವಿಳಂಬವಾಗಬಹುದು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News