ಕೊರೋನ ಮರಣದ ಪ್ರಮಾಣ ಶೇ. 2.5ಕ್ಕೆ ಇಳಿಕೆ, ಚೇತರಿಕೆ ಪ್ರಮಾಣ ಶೇ.64ಕ್ಕೆ ಏರಿಕೆ: ಆರೋಗ್ಯ ಸಚಿವಾಲಯ
ಹೊಸದಿಲ್ಲಿ, ಜು. 28: ಭಾರತದಲ್ಲಿ ಕೊರೋನ ಮರಣ ಪ್ರಮಾಣ ಜೂನ್ 18ರಂದು ಇದ್ದ ಶೇ. 3.33ರಿಂದ ಇಂದು ಶೇ. 2.25ಕ್ಕೆ ಇಳಿಕೆಯಾಗಿದೆ. ಅದೇ ರೀತಿ ಚೇತರಿಕೆ ಪ್ರಮಾಣ ಜೂನ್ ಮಧ್ಯ ಭಾಗ ಇದ್ದ ಸುಮಾರು ಶೇ. 53ರಿಂದ ಶೇ. 64ಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 35,176 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು ಚೇತರಿಕೆಯಾದವರ ಸಂಖ್ಯೆ 9,52,743ಕ್ಕೆ ಏರಿಕೆಯಾಗಿದೆ. ಇದು 4,55,755 ಸಕ್ರಿಯ ಕೊರೋನ ಪ್ರಕರಣಗಳಿಗಿಂತ ಹೆಚ್ಚಾಗಿದೆ ಎಂದು ಅದು ಹೇಳಿದೆ. ವಿಶ್ವದ ಅತಿ ಕಡಿಮೆ ಸಾವು ಸಂಭವಿಸಿದ ದೇಶವಾಗಿ ಭಾರತ ಹೊರಹೊಮ್ಮಿದೆ ಎಂದು ಹೇಳಿರುವ ಸಚಿವಾಲಯ, ಮನೆ-ಮನೆ ಸಮೀಕ್ಷೆಯೊಂದಿಗೆ ಕಂಟೈನ್‌ಮೆಂಟ್ ತಂತ್ರದ ಸಂಯೋಜನೆ, ಚಿಕಿತ್ಸಾ ವಿಧಾನದ ಸಮಗ್ರ ಮಾನದಂಡವನ್ನು ಆಧರಿಸಿ ತುರ್ತು ಪರೀಕ್ಷೆ ಹಾಗೂ ಪ್ರಮಾಣಿತ ಚಿಕಿತ್ಸಾ ನಿರ್ವಹಣೆಯ ಮಾನದಂಡಗಳ ಪರಿಣಾಮಕಾರಿ ಅನುಷ್ಠಾನದಿಂದ ಈ ಫಲಿತಾಂಶ ಪಡೆಯಲು ಸಾಧ್ಯವಾಯಿತು ಎಂದು ಒತ್ತಿ ಹೇಳಿದೆ.
ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಗಂಭೀರ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದಕ್ಕೆ ಹಾಗೂ ಕ್ಷೇತ್ರ ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಂಡು ಅತಿ ಅಪಾಯದ ಜನರ ಚಿಕಿತ್ಸೆಗೆ ಆದ್ಯತೆ ನೀಡುವುದಕ್ಕೆ ಗಮನ ಕೇಂದ್ರೀಕರಿಸಿರುವುದು ದೇಶಾದ್ಯಂತ ಸಾವಿನ ಪ್ರಮಾಣ ಇಳಿಕೆಗೆ ಕಾರಣವಾಯಿತು ಎಂದು ಅದು ತಿಳಿಸಿದೆ. ತ್ವರಿತ ಹಾಗೂ ತಡೆ ರಹಿತ ರೋಗಿಗಳ ನಿರ್ವಹಣೆಯೊಂದಿಗೆ ಮೂರು ಹಂತದ ಆಸ್ಪತ್ರೆ ಮೂಲ ಸೌಕರ್ಯಗಳು ಚೇತರಿಕೆಯ ಸ್ಥಿರ ಹೆಚ್ಚಳಕ್ಕೆ ನೆರವಾಗಿದೆ. ಸತತ ಐದನೇ ದಿನವೂ ಭಾರತ ದಿನಕ್ಕೆ 30 ಸಾವಿರಕ್ಕೂ ಅಧಿಕ ಚೇತರಿಕೆಯಾಗಿದ್ದಾರೆ ಎಂದು ಅದು ಹೇಳಿದೆ.
ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,96,988 ಆಗಿದೆ. ಎಲ್ಲರೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.