ಬಕ್ರೀದ್ ಸಂದರ್ಭ ಜಾನುವಾರು ವ್ಯಾಪಾರಿಗಳ ಮೇಲೆ ಸೆಕ್ಷನ್ 110

Update: 2020-07-29 05:33 GMT

ಮಂಗಳೂರು: ಬಕ್ರೀದ್‌ನ ‘ಕುರ್ಬಾನಿ’ ಆಚರಣೆಯ ಆರಂಭದಲ್ಲೇ ಪೊಲೀಸ್ ಇಲಾಖೆ ಸೆ.110ರಡಿ ಮಾಂಸ ವ್ಯಾಪಾರಿಗಳು, ಜಾನುವಾರು ಸಾಗಾಟಗಾರರಿಂದ ‘ಜಾಮೀನು ಮುಚ್ಚಳಿಕೆ’ ಬರೆಸಿಕೊಳ್ಳುತ್ತಿರುವುದು ಸಾರ್ವಜನಿಕವಾಗಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುಂಜಾಗ್ರತೆ ಕ್ರಮವಾಗಿ ಸೆ.110ನಡಿ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಇದು ಠಾಣೆಯಲ್ಲೇ ಜಾಮೀನು ಸಿಗುವಂತಹ ಪ್ರಕರಣವಾಗಿರುತ್ತದೆ. ಒಂದು ವೇಳೆ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಅದಕ್ಕೆ ಸೆ.110ಗೆ ಒಳಗಾದವರನ್ನು ಹೊಣೆಗಾರರನ್ನಾಗಿಸಲಾಗುತ್ತದೆ. ಇದೀಗ ಈ ಸೆಕ್ಷನ್ ಮೂಲಕ ಕುರ್ಬಾನಿಗೆ ಅಡ್ಡಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ಮತ್ತು ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಈಗಾಗಲೇ ಮಾಂಸ ವ್ಯಾಪಾರಿಗಳು, ಜಾನುವಾರು ಸಾಗಾಟಗಾರರಿಂದ ‘ಜಾಮೀನು ಮುಚ್ಚಳಿಕೆ’ ಬರೆಸಿಕೊಳ್ಳುವ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ.

ಕರಾವಳಿ (ದ.ಕ. ಮತ್ತು ಉಡುಪಿ ಜಿಲ್ಲೆ)ಯಲ್ಲಿ ಜು.31 ರಂದು ಬಕ್ರೀದ್ ಆಚರಿಸಲಾಗುತ್ತದೆ. ಈ ಸಂದರ್ಭ ಕುರ್ಬಾನಿ (ಪ್ರಾಣಿ ಬಲಿ) ನೀಡುವುದು ಸಂಪ್ರದಾಯವಾಗಿದೆ. ರಾಜ್ಯ ಗುಪ್ತವಾರ್ತೆ ವಿಭಾಗದ ಪೊಲೀಸ್ ಅಧೀಕ್ಷಕರು (ಮತೀಯ) ಜು.21ರಂದು ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ಅಧೀಕ್ಷಕರು, ವಲಯ ಪೊಲೀಸ್ ಮಹಾನಿರೀಕ್ಷಕರಿಗೆ ಪತ್ರವೊಂದನ್ನು ಬರೆದು ‘ತಮ್ಮ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ಗೋಹತ್ಯೆ, ಗೋ ಸಾಗಣೆ ತಡೆಯುವ ನಿಟ್ಟಿನಲ್ಲಿ ಸೂಕ್ಷ್ಮ ಸ್ಥಳಗಳನ್ನು ಗುರುತಿಸಬೇಕು ಮತ್ತು ಬ್ಯಾರಿಕೇಡ್ ಅಳವಡಿಸಿ ವಾಹನ ತಪಾಸಣೆ ಮಾಡಬೇಕು. ಎಲ್ಲ ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಬೇಕು, ನಿರಂತರವಾಗಿ ಅಕ್ರಮ ಗೋಸಾಗಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ಅಕ್ರಮ ಗೋಸಾಗಣೆ ಕಾಯ್ದೆಗಳಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲಿ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದಲ್ಲಿ ಸಂಬಂಧಪಟ್ಟ ಕಲಂಗಳಲ್ಲಿ ಕೇಸು ದಾಖಲಿಸಬೇಕು. ಈ ಬಗ್ಗೆ ಸ್ಥಳೀಯ ಪೊಲೀಸರಲ್ಲದೆ ಮಹಾನಗರ ಪಾಲಿಕೆ ಸಹಿತ ಸ್ಥಳೀಯಾಡಳಿತದ ಅಧಿಕಾರಿ-ಸಿಬ್ಬಂದಿ ವರ್ಗಕ್ಕೂ ತಿಳುವಳಿಕೆ ನೀಡಿ ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ.

ಕೆಲವು ಸಂಘ ಪರಿವಾರದ ಸಂಘಟನೆಗಳು ಗೋರಕ್ಷಕರ ಹೆಸರಿನಲ್ಲಿ ತಾವೇ ಖುದ್ದು ಅನುಮಾನಾಸ್ಪದ ವಾಹನಗಳನ್ನು ತಡೆಯುವುದು, ವಾಹನ ತಪಾಸಣೆ ಮಾಡುವುದು, ಚಾಲಕರ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳೂ ಇವೆ. ಬಕ್ರೀದ್ ಸಂದರ್ಭ ಉಭಯ ಕೋಮುಗಳ ನಡುವೆ ಯಾವುದೇ ಘರ್ಷಣೆಗಳಾಗದಂತೆ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಪತ್ರದಲ್ಲಿ ಕೋರಿಕೊಂಡಿದ್ದಾರೆ.

ಅದರಂತೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರತಿಯೊಬ್ಬ ಮಾಂಸ ವ್ಯಾಪಾರಿಗಳು, ಜಾನುವಾರು ಸಾಗಾಟಗಾರರು, ಅಕ್ರಮ ಗೋಸಾಗಾಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆಲ್ಲ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ನೂರಾರು ಮಂದಿಯ ಮೇಲೆ ಸೆ.110ರ ಅನ್ವಯ ಪ್ರಕರಣ ದಾಖಲಿಸಿ ಜಾಮೀನು ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಪ್ರತಿಯೊಬ್ಬರ ಫೋಟೊ, ಆಧಾರ್ ಕಾರ್ಡ್, ಜಾಮೀನು ಕೊಡುವವರ ಹೆಸರಿನಲ್ಲಿರುವ ಆರ್‌ಟಿಸಿ ಪ್ರತಿಗಳನ್ನು ಪಡೆಯುತ್ತಿದ್ದಾರೆ. ಅಲ್ಲದೆ ಬಾಂಡ್ ಪೇಪರ್ ಮೇಲೆ ಕನಿಷ್ಠ ಒಂದು ಲಕ್ಷ ರೂ. ಮೊತ್ತವನ್ನು ನಮೂದಿಸಿ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. ತಮ್ಮ ಕರೆಗೆ ಸ್ಪಂದಿಸದವರಿಗೆ ಮತ್ತೆ ಮತ್ತೆ ಕರೆ ಮಾಡಿ ‘ತಕ್ಷಣ ಬನ್ನಿ... ಇಲ್ಲದಿದ್ದರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸುವ’ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ರೀತಿ ಉಳ್ಳಾಲ, ಸುರತ್ಕಲ್, ಜೋಕಟ್ಟೆ, ಕುಳಾಯಿ, ಕೂಳೂರು, ಪಣಂಬೂರು ಪರಿಸರದ ನೂರಾರು ಮಂದಿಯನ್ನು ಪೊಲೀಸರು ಫೋನ್ ಕರೆ ಮಾಡಿ ಠಾಣೆಗೆ ಕರೆಸಿಕೊಂಡು ಕ್ರಮ ಜರುಗಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ದ.ಕ. ಸಂಸದರ ಸಮ್ಮುಖ ಜಿಲ್ಲಾಧಿಕಾರಿ, ಹಿರಿಯ ಪೊಲೀಸ್ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಬಕ್ರೀದ್ ಸಂದರ್ಭ ಅಕ್ರಮ ಜಾನುವಾರು ಸಾಗಾಟ, ಪ್ರಾಣಿಬಲಿ ತಡೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸೂಚನೆ ನೀಡ ಲಾಗಿದೆ. ಹಬ್ಬದ ಸಂದರ್ಭ ಎಲ್ಲಿಯಾದರೂ ಜಾನುವಾರು ಅಕ್ರಮ ಸಾಗಾಟ, ಅಹಿತಕರ ಘಟನೆ, ಅನಧಿಕೃತ ಪ್ರಾಣಿಬಲಿ ನಡೆದರೆ ಅದಕ್ಕೆ ಆಯಾ ಠಾಣಾ ವ್ಯಾಪ್ತಿಯಲ್ಲಿ ‘ಸೆ.110’ರಡಿ ಪ್ರಕರಣ ಹೊಂದಿದವರೇ ಹೊಣೆ ಎಂದು ಸೂಚಿಸಲಾಗುತ್ತದೆ. ಇದು ಸೆ.110 ಪ್ರಕರಣ ದಾಖಲಿಸಲ್ಪಟ್ಟವರ ನಿದ್ದೆಗೆಡಿಸಿದೆ. ಈ ಮಧ್ಯೆ ಸೆ.110ಕ್ಕೆ ಸಹಕರಿಸದಿದ್ದರೆ ಸೆ.353ರ ಮೂಲಕ (ಪೊಲೀಸರ ಕರ್ತವ್ಯಕ್ಕೆ ಅಡ್ಡಿ) ಜಾಮೀನು ರಹಿತ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಬಕ್ರೀದ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅಕ್ರಮ ಜಾನುವಾರು ಸಾಗಾಟ ತಡೆಯುವ ಸಲುವಾಗಿ ಅಲ್ಲಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ, ಬ್ಯಾರಿಕೇಡ್ ಅಳವಡಿಸಲಾಗುತ್ತದೆ. ಮುಂಜಾಗ್ರರೂಕತೆ ಕ್ರಮವಾಗಿ ಹಲವರ ವಿರುದ್ಧ ಸೆ.110 ಪ್ರಕರಣ ದಾಖಲಿಸಲಾಗುತ್ತದೆ.

-ಅರುಣಾಂಶುಗಿರಿ

ಪೊಲೀಸ್ ಉಪಾಯುಕ್ತ, ಕಾನೂನು ಮತ್ತು ಸುವ್ಯವಸ್ಥೆ ಮಂಗಳೂರು ಪೊಲೀಸ್ ಆಯುಕ್ತಾಲಯ

ದ.ಕ. ಜಿಲ್ಲೆಯಲ್ಲಿ ಕುದ್ರೋಳಿ ಕಸಾಯಿಖಾನೆ ಮಾತ್ರ ಅಧಿಕೃತವಾಗಿದ್ದು, ಸಂಪ್ರದಾಯದಂತೆ ನಾವು ಪ್ರತೀ ಬಕ್ರೀದ್ ಸಂದರ್ಭ ನಾಲ್ಕು ದಿನ ಕುರ್ಬಾನಿ ಮಾಡಲು ವಿಶೇಷ ಅನುಮತಿಯನ್ನು ಕೇಳಿ ಪಡೆಯುತ್ತೇವೆ. ಈ ಬಾರಿಯೂ ಕೇಳಲಿದ್ದೇವೆ. ಅನುಮತಿ ಲಭಿಸುವ ವಿಶ್ವಾಸವೂ ಇದೆ. ಕುರ್ಬಾನಿ ಆಚರಣೆಯು ನಮ್ಮ ಸಂಪ್ರದಾಯವಾಗಿದೆ.

- ಅಲಿ ಹಸನ್

ಮಾಂಸ ವ್ಯಾಪಾರಸ್ಥರ ಸಂಘ, ಮಂಗಳೂರು

ಮಾಂಸ ವ್ಯಾಪಾರಿಗಳ ಮೇಲೆ ಪೊಲೀಸ್ ಇಲಾಖೆಯು ಸೆ.110 ಹಾಕುವುದು ಇದು ಮೊದಲೇನು ಅಲ್ಲ. ಈ ಹಿಂದೆಯೂ ಹಾಕಿದೆ. ಆದರೆ, ಬಿಜೆಪಿ ಸರಕಾರ ಬಂದಾಗ ಸಂಬಂಧಪಟ್ಟ ಇಲಾಖೆಯವರು ಜನಪ್ರತಿನಿಧಿಗಳನ್ನು ಮೆಚ್ಚಿಸಲು ನಮ್ಮ ಮೇಲೆ ಬೇರೆ ಬೇರೆ ರೀತಿಯಲ್ಲಿ ಒತ್ತಡ ಹಾಕಿ ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನಮ್ಮದು ಅಧಿಕೃತ ಮಾಂಸ ವ್ಯಾಪಾರವೇ ಹೊರತು ಅನಧಿಕೃತವಲ್ಲ. ಅಲ್ಲಲ್ಲಿ ಶ್ರೀಮಂತರು, ಅನುಕೂಲಸ್ಥರು ಕುರ್ಬಾನಿ ಮಾಡಿಸಿದರೆ ಅಥವಾ ಗೋ ಅಕ್ರಮ ಸಾಗಾಟ-ವ್ಯಾಪಾರ-ವಧೆ ಮಾಡಿದರೆ ಅದಕ್ಕೆ ಪರವಾನಿಗೆ ಪಡೆದು ವ್ಯಾಪಾರ ಮಾಡುವ ನಾವು ಹೊಣೆಗಾರರಾಗಲು ಸಾಧ್ಯವಿಲ್ಲ. ‘ಕುರ್ಬಾನಿ’ಯು ಸಾಂಪ್ರದಾಯಿಕ ಆಚರಣೆಯಾಗಿದ್ದು, ಅದಕ್ಕೆ ಯಾವ ಕಾರಣಕ್ಕೂ ಪೊಲೀಸ್ ಇಲಾಖೆ ಅಡ್ಡಿಪಡಿಸುವುದು ಸರಿಯಲ್ಲ.

-ಅನ್ವರ್ ಕುಳಾಯಿ ಮತ್ತು ಹನೀಫ್ ಜೋಕಟ್ಟೆ,

ಜಾನುವಾರು ವ್ಯಾಪಾರಿಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News