ಆನ್ ಲೈನ್ ಶಿಕ್ಷಣ ಭರಾಟೆ: ವಿದ್ಯಾಭ್ಯಾಸ ವಂಚಿತರಾಗುತ್ತಿರುವ ಆದಿವಾಸಿ ಕುಟುಂಬಗಳ ಮಕ್ಕಳು

Update: 2020-07-29 06:25 GMT
ಸಾಂದರ್ಭಿಕ ಚಿತ್ರ

ಬೆಳ್ತಂಗಡಿ: ಪರ-ವಿರೋಧದ ನಡುವೆಯೇ ಬಹುತೇಕ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಗಳನ್ನು ಆರಂಭಿಸಿವೆ. ಪ್ರಾಥಮಿಕ ತರಗತಿಗಳಿಂದ ಉನ್ನತ ಶಿಕ್ಷಣದವರೆಗೂ ಆನ್‌ಲೈನ್ ಶಿಕ್ಷಣ ನಡೆಯುತ್ತಿದೆ. ಆದರೆ ಬೆಳ್ತಂಗಡಿ ತಾಲೂಕಿನ ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಕುಟುಂಬಗಳ ಬಹುತೇಕ ಮಕ್ಕಳು ನೆಟ್‌ವರ್ಕ್ ಸಮಸ್ಯೆಯಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಬಹುತೇಕ ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶಗಳಿಂದಲೇ ಕೂಡಿರುವ ಬೆಳ್ತಂಗಡಿ ತಾಲೂಕಿನಲ್ಲಿ ನೆಟ್‌ವರ್ಕ್ ಸಮಸ್ಯೆ ತೀವ್ರವಾಗಿದೆ. ರಸ್ತೆಬದಿಯಲ್ಲೇ ಸರಿಯಾಗಿ ನೆಟ್‌ವರ್ಕ್ ಇಲ್ಲವಾಗಿದ್ದು, ಇನ್ನು ಅರಣ್ಯ ಪ್ರದೇಶದ ಜನರ ಸಮಸ್ಯೆ ಹೇಳತೀರದು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ದಟ್ಟ ಅಡವಿ ಯಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗಂತೂ ಆನ್‌ಲೈನ್ ಶಿಕ್ಷಣ ಎಂಬುದು ಬರೇ ಕನಸು ಮಾತ್ರವಾಗಿದೆ. ಇದರಿಂದಾಗಿ ಈ ಮಕ್ಕಳು ಯಾವ ರೀತಿಯಾಗಿ ಶಿಕ್ಷಣ ಮುಂದುವರಿಸುವುದು ಎಂದು ತಿಳಿಯದೆ ಪರದಾಡುವಂತಾಗಿದೆ. ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿನ ಜನರ ಸಮಸ್ಯೆ ಮಾತ್ರವಲ್ಲ, ಅಡವಿಯಂಚಿನಲ್ಲಿ ಬದುಕುತ್ತಿರುವ ಬಹುತೇಕ ಮಕ್ಕಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರಾಥಮಿಕ ತರಗತಿಗಳಿಂದ ಆರಂಭಿಸಿ ಉನ್ನತ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಇಲ್ಲಿದ್ದಾರೆ. ಕೆಲವರು ಸಮರ್ಪಕವಾಗಿ ಆನ್‌ಲೈನ್ ಶಿಕ್ಷಣ ಸಿಗದೆ ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದಾರೆ. ಇನ್ನು ಕೆಲವರು ಆನ್‌ಲೈನ್ ಶಿಕ್ಷಣಕ್ಕಾಗಿ ಎಲ್ಲೆಲ್ಲೊ ಇರುವ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಇದು ಎಷ್ಟು ದಿನ ಎಂಬುದು ಅವರ ಪ್ರಶ್ನೆಯಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ನಾರಾವಿ, ಕುತ್ಲೂರು, ನಾವರ, ಅಳದಂಗಡಿ, ಶಿರ್ಲಾಲು, ಸವಣಾಲು, ನಾವೂರು, ನಡ, ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ ಸೇರಿದಂತೆ ಅರಣ್ಯದ ಅಂಚಿನಲ್ಲಿರುವ ನೆರಿಯ, ಚಾರ್ಮಾಡಿ, ಪುದುವೆಟ್ಟು, ಶಿಶಿಲ, ಶಿಬಾಜೆ, ಕಳೆಂಜ ಗ್ರಾಮಗಳ ಜನರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲೆಲ್ಲ ಆನ್‌ಲೈನ್ ಶಿಕ್ಷಣ ಅಸಾಧ್ಯವಾಗಿದೆ.

ಬಹುತೇಕ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವೆಂಬುದು ಬರೇ ಕನಸಾಗಿಯೇ ಉಳಿದಿದೆ. ಕೆಲವೆಡೆ ಗುಡ್ಡ ಬೆಟ್ಟಗಳನ್ನು ಹತ್ತಿ ಕೆಲವರು ನೆಟ್‌ವರ್ಕ್ ಪಡೆಯಲು ಯತ್ನಿಸುತ್ತಿದ್ದಾರೆ, ಅದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಸರಕಾರ ಇನ್ನಾದರೂ ಎಚ್ಚೆತ್ತು ಈ ಕಾಡಿನ ಮಕ್ಕಳ ಬಗ್ಗೆ ಗಮನ ಹರಿಸದಿದ್ದರೆ ಇವರು ಶಿಕ್ಷಣದಿಂದ ವಂಚಿತರಾಗಬೇಕಾಗಿದೆ.

ಬಹುತೇಕ ಆದಿವಾಸಿಗಳು ಅರಣ್ಯದ ಒಳಗೆ ಅಥವಾ ಅರಣ್ಯದ ಅಂಚಿನಲ್ಲಿ ವಾಸಿಸುತ್ತಿದ್ದು ಹಾಸ್ಟೆಲ್‌ಗಳಲ್ಲಿ ಇದ್ದು ಕೊಂಡೇ ಹೆಚ್ಚಿನವರು ಶಿಕ್ಷಣ ಪಡೆಯುತ್ತಿದ್ದರು. ಇದೀಗ ಆನ್‌ಲೈನ್ ತರಗತಿಗಳು ನಡೆಯುತ್ತಿದೆ. ಆದರೆ ಇವರ ಮನೆಗಳಿರುವ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುವುದೇ ಕಷ್ಟಕರ. ಇದರಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಸರಕಾರ ಕೂಡಲೇ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣ ಪಡೆಯಲು ಅವಕಾಶ ಒದಗಿಸಬೇಕಾಗಿದೆ.ಆನ್‌ಲೈನ್ ಶಿಕ್ಷಣ ಎಲ್ಲರಿಗೂ ತಲುಪುವಂತಾಗಬೇಕು ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು

ಜಯಾನಂದ ಪಿಲಿಕಲ

ಕಾರ್ಯದರ್ಶಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ

 ಅಂತಿಮ ಪದವಿ ವಿದ್ಯಾರ್ಥಿಗಳಾದ ನಮಗೆ ಆನ್‌ಲೈನ್‌ನಲ್ಲಿ ತರಗತಿಗಳನ್ನು ಮಾಡುತ್ತಿದ್ದಾರೆ. ಆದರೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ನಮಗೆ ಈ ತರಗತಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದೀಗ ಪರೀಕ್ಷೆ ಬರೆಯಬೇಕಾಗಿದೆ. ಆನ್‌ಲೈನ್ ಶಿಕ್ಷಣ ಪಡೆದವರಿಗೆ ಹೆಚ್ಚಿನ ಮಾಹಿತಿ ಇರುತ್ತದೆ ನಾವು ಅದರಿಂದ ವಂಚಿತರಾಗಿರುವುದರಿಂದ ನಮ್ಮದಲ್ಲದ ತಪ್ಪಿಗೆ ಕಲಿಕೆಯಲ್ಲಿ ಹಿಂದುಳಿಯುವಂತಾಗಿದೆ.

ಭವ್ಯಾ, ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ

Writer - ಶಿಬಿ ಧರ್ಮಸ್ಥಳ

contributor

Editor - ಶಿಬಿ ಧರ್ಮಸ್ಥಳ

contributor

Similar News