ಉತ್ತರ ಪ್ರದೇಶ: ಕೊರೋನ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರಿಗೆ ನೀಡುವ ಆಹಾರದಲ್ಲಿ ಹುಳಗಳು!
ಲಕ್ನೋ: ನಗರದ ಆಸ್ಪತ್ರೆಯೊಂದರಲ್ಲಿ ಕೋವಿಡ್ ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ಇತರ ಸಿಬ್ಬಂದಿಗೆ ಒದಗಿಸಲಾದ ಆಹಾರ ಪ್ಯಾಕೆಟ್ ಗಳಲ್ಲಿ ಹುಳಗಳಿದ್ದವೆಂದು ಹಲವು ಸಿಬ್ಬಂದಿ ದೂರಿದ್ದಾರೆ. ತಮಗೆ ಒದಗಿಸಲಾದ ವಸತಿ ಸೌಕರ್ಯವೂ ಕಳಪೆಯಾಗಿತ್ತೆಂದು ಸಿಬ್ಬಂದಿ ದೂರಿದ್ದಾರೆ.
ಕೆಲವೊಮ್ಮೆ ಅವರ ವಸತಿ ಪ್ರದೇಶದಲ್ಲಿ ಫ್ಯಾನ್ ಕೂಡ ಕೆಲಸ ಮಾಡುತ್ತಿಲ್ಲ ಎಂದು ಉತ್ತರ ಪ್ರದೇಶದ ರೆಸಿಡೆಂಟ್ ಡಾಕ್ಟರ್ಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಡಾ ನೀರಜ್ ಮಿಶ್ರಾ ಹೇಳಿದ್ದಾರೆ.
ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಸಿಬ್ಬಂದಿ ಹಾಗೂ ವೈದ್ಯರುಗಳಿಗೆ ಒದಗಿಸಲಾದ ಆಹಾರದ ಚಿತ್ರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರು ಶೇರ್ ಮಾಡಿದ್ದಾರೆ. ಕೋವಿಡ್ ಕರ್ತವ್ಯದಲ್ಲಿರುವ ವೈದ್ಯರುಗಳಿಗೆ ಉತ್ತಮ ಸವಲತ್ತುಗಳನ್ನು ಒದಗಿಸಬೇಕೆಂದು ವೈದ್ಯರುಗಳು ಸಂಸ್ಥೆಯ ಉಪಕುಲಪತಿಗಳಿಗೂ ಪತ್ರ ಬರೆದಿದ್ದಾರೆ.
ಬಸ್ತಿ ಜಿಲ್ಲೆಯಲ್ಲಿ ಕೂಡ ತಮಗೆ ಒದಗಿಸಲಾದ ಕಳಪೆ ಆಹಾರ ಕುರಿತಾದ ಚಿತ್ರಗಳನ್ನು ವೈದ್ಯರು ಶೇರ್ ಮಾಡಿದ್ದಾರೆ.