ದಿಲ್ಲಿ ವಿ.ವಿ. ಅಧ್ಯಾಪಕರ ಬಂಧನ : ಕೇಂದ್ರ ಸರಕಾರಕ್ಕೆ ಲೇಖಕಿ ಆರುಂಧತಿ ರಾಯ್ ತರಾಟೆ
ಹೊಸದಿಲ್ಲಿ, ಜು. 29: ಸಾಮಾಜಿಕ ಹೋರಾಟಗಾರರು, ಶಿಕ್ಷಣ ತಜ್ಞರು ಹಾಗೂ ವಕೀಲರನ್ನು ಬಂಧಿಸುತ್ತಿರುವುದಕ್ಕೆ ಹಾಗೂ ಅವರೊಂದಿಗೆ ನಿರ್ದಯವಾಗಿ ನಡೆದುಕೊಳ್ಳುತ್ತಿರುವುದಕ್ಕೆ ಲೇಖಕಿ ಆರುಂಧತಿ ರಾಯ್ ಕೇಂದ್ರ ಸರಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಭೀಮಾ ಕೋರೆಗಾಂವ್ ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದ ಬಳಿಕ ಅರುಂಧತಿ ರಾಯ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸರಕಾರ ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಹೋರಾಟಗಾರರನ್ನು ಗುರಿಯಾಗಿರಿಸಿದೆ ಎಂದು ಆರುಂಧತಿ ರಾಯ್ ಆರೋಪಿಸಿದ್ದಾರೆ. ಜಾತ್ಯತೀತ, ಜಾತಿ ವಿರೋಧಿ, ಬಂಡವಾಳಶಾಹಿ ವಿರೋಧಿ ರಾಜಕೀಯವನ್ನು ಪ್ರತಿನಿಧಿಸುವ ಜನರು ಸರಕಾರದ ವಿನಾಶಕಾರಿ ಹಿಂದೂ ರಾಷ್ಟ್ರೀಯವಾದಿ ರಾಜಕೀಯಕ್ಕೆ ಬೆದರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ದಿಲ್ಲಿ ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದ ಸಹ ಪ್ರಾಧ್ಯಾಪಕ 54ರ ಹರೆಯದ ಹ್ಯಾನಿ ಬಾಬು ಮುಸಲಿಯಾರ್‌ವೀಟಿಲ್ ನಕ್ಸಲ್ ಚಟುವಟಿಕೆ ಹಾಗೂ ಮಾವೋವಾದಿ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದಾರೆ ಹಾಗೂ ಕೊರೇಗಾಂವ್ ಪ್ರಕರಣದಲ್ಲಿ ಅವರು ಸಹ ಪಿತೂರಿಗಾರ ಎಂದು ಎನ್‌ಐಎ ಆರೋಪಿಸಿದೆ. ಬಾಬು ಅವರನ್ನು ಬಂಧಿಸಿರುವುದನ್ನು ಜವಾಹರ್ ಲಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟ (ಜೆಎನ್‌ಯುಎಸ್‌ಯು) ಕೂಡ ಖಂಡಿಸಿದೆ.