ರಕ್ಷಣಾ ಒಪ್ಪಂದ ಹಗರಣ: ಜಯಾ ಜೇಟ್ಲಿ, ಇತರ ಇಬ್ಬರಿಗೆ 4 ವರ್ಷಗಳ ಜೈಲು ಶಿಕ್ಷೆ

Update: 2020-07-30 10:36 GMT

ಹೊಸದಿಲ್ಲಿ: ರಕ್ಷಣಾ ಒಪ್ಪಂದವೊಂದಕ್ಕೆ ಸಂಬಂಧಿಸಿ ಹಗರಣ ಪ್ರಕರಣದಲ್ಲಿ ಸಮತಾ ಪಾರ್ಟಿಯ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಹಾಗೂ ಇತರ ಇಬ್ಬರಿಗೆ ದಿಲ್ಲಿ ನ್ಯಾಯಾಲಯ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಜಯಾ ಜೇಟ್ಲಿಯ ಮಾಜಿ ಸಹೋದ್ಯೋಗಿ ಗೋಪಾಲ್ ಪಚೇರ್ವಾಲ್ ಮತ್ತು ನಿವೃತ್ತ ಮೇಜರ್ ಜನರಲ್ ಎಸ್ಪಿ ಮುರ್ಗೈಗೆ ಈ ಪ್ರಕರಣದಲ್ಲಿ 4 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಶೇಷ ಸಿಬಿಐ ನ್ಯಾಯಾಧೀಶ ವಿರೇಂದರ್ ಭಟ್ ಘೋಷಿಸಿದರು.

ಸುದ್ದಿ ತಾಣ tehelka.com 2000ರಲ್ಲಿ ರಕ್ಷಣಾ ಒಪ್ಪಂದಗಳಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳ ಕುರಿತಂತೆ ನಡೆಸಿದ ಕುಟುಕು ಕಾರ್ಯಾಚರಣೆ `ಆಪರೇಷನ್ ವೆಸ್ಟ್ ಎಂಡ್' ಆಧಾರದಲ್ಲಿ ಈ ಪ್ರಕರಣ ದಾಖಲಾಗಿತ್ತು.  2006ರಲ್ಲಿ ಜಯಾ ಜೇಟ್ಲಿ ಹಾಗೂ ಇತರರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತ್ತು.

ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಸೆಕ್ಷನ್ 9 ಹಾಗೂ ಐಪಿಸಿಯ ಸೆಕ್ಷನ್  120 ಅನ್ವಯ ತಪ್ಪಿತಸ್ಥರು ಎಂದು ವಿಶೇಷ ಸಿಬಿಐ ನ್ಯಾಯಾಧೀಶ ವೀರೇಂದ್ರ ಭಟ್ ತಮ್ಮ ತೀರ್ಪಿನಲ್ಲಿ ಹೇಳಿದ್ದರು.

ತೆಹಲ್ಕಾ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಮಾರುವೇಷದ ತೆಹಲ್ಕಾ ಪತ್ರಕರ್ತರು ಜಯಾ ಜೇಟ್ಲಿಗೆ ರೂ 2 ಲಕ್ಷ ನೀಡಿದ ನಂತರ ಆಕೆ ತನ್ನ ಸ್ನೇಹಿತ ಹಾಗೂ ಆಗಿನ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಮನವೊಲಿಸಿ ಥರ್ಮಲ್ ಇಮೇಜರ್ಸ್ ಗುತ್ತಿಗೆಯನ್ನು ವೆಸ್ಟ್ ಎಂಡ್ ಇಂಟರ್‍ನ್ಯಾಷನಲ್ ಎಂಬ ಕಂಪೆನಿಗೆ ಕೊಡಿಸುವುದಾಗಿ ತಿಳಿಸಿದ್ದರು. ವೆಸ್ಟ್ ಎಂಡ್ ಎಂಬ ಹೆಸರಿನ ಕಂಪೆನಿ ಕಪೋಲಕಲ್ಪಿತವಾಗಿದ್ದು ಕುಟುಕು ಕಾರ್ಯಾಚರಣೆಗಾಗಿ ಬಳಸಲಾಗಿತ್ತು.

ಜಾರ್ಜ್ ಫೆರ್ನಾಂಡಿಸ್ ಅವರ ಮೇಲೆ ಈ ಕುರಿತಂತೆ ಯಾವುದೇ ಆರೋಪವಿಲ್ಲದೇ ಇದ್ದರೂ ಅವರು ನಂತರ ರಕ್ಷಣಾ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News