ಬಡವರಿಗೆ ತಲುಪುವ ಬಲಿಮಾಂಸ

Update: 2020-07-30 19:30 GMT

ಪ್ರಾಣಿ ಬಲಿಯು ಹಜ್ ಮತ್ತು ಅಝ್‌ಹಾ ಹಬ್ಬದ ಭಾಗವಾಗಿದೆ. ಆದರೆ ಪ್ರಾಣಿ ಬಲಿಯ ಅರ್ಥ ದೇವರಿಗೆ ರಕ್ತ ಅರ್ಪಿಸುವುದಲ್ಲ. ಇಲ್ಲಿ ದೇವರು ರಕ್ತದಾಹಿಯಲ್ಲ. ಯಾರೂ ಅವನಿಗೆ ಏನನ್ನೂ ತಿನ್ನಿಸಬೇಕಾಗಿಲ್ಲ. ‘‘ಅವುಗಳ (ಬಲಿಪ್ರಾಣಿಗಳ) ಮಾಂಸವಾಗಲಿ ಅವುಗಳ ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ. ನಿಮ್ಮಿಂದ ಅವನಿಗೆ ತಲುಪುವುದು (ನಿಮ್ಮ) ಧರ್ಮ ನಿಷ್ಠೆ ಮಾತ್ರ.’’ (ಪವಿತ್ರ ಕುರ್‌ಆನ್ - 22:37) ‘‘ಅವನು (ಎಲ್ಲರಿಗೆ) ಉಣಿಸುತ್ತಾನೆ ಮತ್ತು ತಾನು ಉಣ್ಣುವುದಿಲ್ಲ.’’ (ಪವಿತ್ರ ಕುರ್‌ಆನ್ - 6:14)

ಜಗತ್ತಿನಲ್ಲಿ ಸುಮಾರು ಶೇ. 90 ಜನರು ಮಾಂಸಾಹಾರಿಗಳಾಗಿದ್ದಾರೆ. ಪ್ರಸ್ತುತ ಮಾಂಸಾಹಾರಿಗಳ ಪೈಕಿ ಹೆಚ್ಚಿನವರಿಗೆ ಮಾಂಸಾಹಾರವೇ ಅತ್ಯಂತ ಪ್ರಿಯ ಆಹಾರವಾಗಿರುತ್ತದೆ. ಆದರೆ ಮಾಂಸವು ದುಬಾರಿಯಾಗಿರುವುದರಿಂದ ನಿತ್ಯ ಮಾಂಸ ಖರೀದಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಎಂದಾದರೂ ಅಪರೂಪಕ್ಕೆ ಮಾಂಸಾಹಾರ ಸಿಕ್ಕರೆ ಅವರು ಸಂಭ್ರಮಿಸುತ್ತಾರೆ. ಹಜ್, ಬಕ್ರೀದ್ ಮುಂತಾದ ಸಂದರ್ಭಗಳಲ್ಲಿ ಮುಸ್ಲಿಮರು ಬಲಿ ನೀಡುವ ಪ್ರಾಣಿಗಳ ಮಾಂಸವು ವ್ಯರ್ಥವಾಗುವುದಿಲ್ಲ. ಬಲಿ ನೀಡಿದ ವರು ಒಂದು ಪಾಲನ್ನು ತಾವಿಟ್ಟುಕೊಂಡು ಉಳಿದದ್ದನ್ನೆಲ್ಲಾ ತಮ್ಮ ಕುಟುಂಬದವರು, ನೆರೆಯವರು ಮತ್ತು ಸಮಾಜದ ಬಡ ಬಗ್ಗರಿಗೆ ತಲುಪಿಸುತ್ತಾರೆ. ಹಜ್ ವೇಳೆ ಬಲಿ ನೀಡಲಾಗುವ ಸುಮಾರು 10 ಲಕ್ಷಕ್ಕೂ ಹೆಚ್ಚು ಪ್ರಾಣಿಗಳ ಮಾಂಸವನ್ನು ಜಗತ್ತಿನ ಅನೇಕ ಬಡ ದೇಶಗಳ ಮಾಂಸಾಹಾರಿ ಬಡವರಿಗೆ ಆಹಾರದ ರೂಪದಲ್ಲಿ ತಲುಪಿಸಲಾಗುತ್ತದೆ.

ಸೌದಿ ಅರೇಬಿಯಾದಲ್ಲಿ ಪ್ರತಿ ವರ್ಷ ಹಜ್ ಅಥವಾ ಉಮ್ರಾ ಯಾತ್ರಿಕರು ಬಲಿ ನೀಡುವ ಪ್ರಾಣಿಗಳ ವಿಲೇವಾರಿಗೆ ಅಲ್ಲಿನ ಸರಕಾರ ಮತ್ತು ಇಸ್ಲಾಮಿಕ್ ಡೆವಲಪ್‌ಮೆಂಟ್ ಬ್ಯಾಂಕ್‌ನವರು ಬಹಳ ಸುವ್ಯವಸ್ಥಿತ ಏರ್ಪಾಡು ಮಾಡಿದ್ದಾರೆ. ಅಲ್ಲಿ ಹೆಚ್ಚಿನ ಯಾತ್ರಿಕರು ಸ್ವತಃ ಬಲಿಕ್ರಿಯೆಯಲ್ಲಿ ಪಾಲುಗೊಳ್ಳುವುದಿಲ್ಲ. ಅವರು ಕೂಪನ್‌ಗಳನ್ನು ಮಾತ್ರ ಖರೀದಿಸುತ್ತಾರೆ. ಕೂಪನ್ ಖರೀದಿಸಿದವರ ಪರವಾಗಿ ಪ್ರಾಣಿಯನ್ನು ಖರೀದಿಸಿ ಬಲಿಕೊಟ್ಟು ಅವುಗಳ ಮಾಂಸವನ್ನು ಅರ್ಹರಿಗೆ ತಲುಪಿಸುವ ಹೊಣೆಯನ್ನು ಸರಕಾರವೇ ವಹಿಸಿಕೊಳ್ಳುತ್ತದೆ. ಕಳೆದ ವರ್ಷದ(2019) ಮಾಹಿತಿ ಪ್ರಕಾರ ಮಕ್ಕಾ ನಗರದ ಪುರಸಭೆಯ ಅಧೀನದಲ್ಲಿ 8 ಅತ್ಯಾಧುನಿಕ ಮತ್ತು ಸರ್ವಸಜ್ಜಿತ ಕಸಾಯಿ ಖಾನೆಗಳಿವೆ. ಮಾತ್ರವಲ್ಲ, 32 ಪಶು ನಿಯಂತ್ರಣ ಕೇಂದ್ರಗಳಿವೆ.

ಹಜ್ ಮತ್ತು ಉಮ್ರಾ ಯಾತ್ರಿಕರ ಪರವಾಗಿ ಬಲಿ ನೀಡಲಾಗುವ ಪ್ರಾಣಿಗಳ ಆರೋಗ್ಯ ರಕ್ಷಣೆ, ಪರೀಕ್ಷೆ, ಚಿಕಿತ್ಸೆ ಮತ್ತು ಬಲಿಕ್ರಿಯೆಯ ಬಳಿಕ ಅವುಗಳ ರಕ್ತ, ಮಾಂಸ, ಚರ್ಮ ಮತ್ತು ವ್ಯರ್ಥ ಪದಾರ್ಥಗಳನ್ನು ಬೇರ್ಪಡಿಸಿ ಪರಿಷ್ಕರಿಸುವ ಎಲ್ಲ ಏರ್ಪಾಡುಗಳೂ ಈ ಹೈಟೆಕ್ ಕಸಾಯಿಖಾನೆಗಳಲ್ಲಿವೆ. ಸುಮಾರು 1,000ಕ್ಕೂ ಹೆಚ್ಚಿನ ಪಶುವೈದ್ಯರ ಸಹಿತ 40,000ಕ್ಕೂ ಅಧಿಕ ಸಂಖ್ಯೆಯ ನುರಿತ, ಪೂರ್ಣಾವಧಿ ಸಿಬ್ಬಂದಿ ಮತ್ತು ನೂರಾರು ಸ್ವಯಂಸೇವಕರು ಇಲ್ಲಿ ಸೇವೆ ಸಲ್ಲಿಸುತ್ತಾರೆ. ಈ ವ್ಯವಸ್ಥೆಯ ಮೂಲಕ ಬಲಿಪ್ರಾಣಿಗಳ ಪರಿಷ್ಕೃತ ಮಾಂಸವನ್ನು 21 ಬಡ ದೇಶಗಳಿಗೆ ರವಾನಿಸಿ ಅಲ್ಲಿನ ಬಡವರಿಗೆ ವಿತರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News