ಅಂತಿಮ ಪದವಿ ಪರೀಕ್ಷೆಗಳ ರದ್ದತಿ ಇಲ್ಲ: ಸುಪ್ರೀಂಕೋರ್ಟ್‌ಗೆ ಯುಜಿಸಿ ಅಫಿಡವಿಟ್

Update: 2020-07-30 17:51 GMT

 ಹೊಸದಿಲ್ಲಿ,ಜು.30: ಕೊರೋನ ವೈರಸ್ ಲಾಕ್‌ ಡೌನ್‌ ನಿಂದಾಗಿ ಮಾರ್ಚ್ ತಿಂಗಳಿಂದ ನಡೆಯಲು ಬಾಕಿಯಿರುವ ಕಾಲೇಜುಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಅಂತಿಮ ವರ್ಷದ ಪರೀಕ್ಷೆಗಳನ್ನು ರದ್ದುಪಡಿಸಲಾಗುವುದಿಲ್ಲವೆಂದು ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಗುರುವಾರ ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಸಂರಕ್ಷಿಸುವ ಉದ್ದೇಶದಿಂದ ಸೆಪ್ಟೆಂಬರ್ 30ರೊಳಗೆ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಕೈಗೊಂಡಿರುವುದಾಗಿ ಸುಪ್ರೀಂಕೋರ್ಟ್‌ಗೆ ಅದು ತಿಳಿಸಿದೆ.

ಪದವಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಅಂತಿಮ ವಾರ್ಷಿಕ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಕೋರಿ ತನಗೆ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿ ಉತ್ತರಿಸುವಂತೆ ಸುಪ್ರೀಂಕೋರ್ಟ್ ಯುಜಿಸಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಯುಜಿಸಿ ಇಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತನ್ನ ನಿರ್ಧಾರ ತಿಳಿಸಿದೆ. ಕೊರೋನ ವೈರಸ್ ಹಾವಳಿಯ ಕಾರಣದಿಂದಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮರಳಿ ಪರೀಕ್ಷೆಗೆ ಬರೆಯಲು ವಿಶೇಷ ಅವಕಾಶವನ್ನು ನೀಡಲಾಗುವುದೆಂದು ಯುಜಿಸಿ ತಿಳಿಸಿದೆ.

‘‘ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ತಜ್ಞರ ಶಿಫಾರಸುಗಳನ್ನು ಆಧರಿಸಿ ಕೈಗೊಳ್ಳಲಾಗಿದೆ. ಅಂತಿಮ ಪರೀಕ್ಷೆಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಕೆಲವು ರಾಜ್ಯಗಳು ಕೈಗೊಂಡಿರುವ ಕ್ರಮವು ಉನ್ನತ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ ಹಾಗೂ ಅದು ಯುಜಿಸಿ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿಲ್ಲ ’’ಎಂದು ಯುಜಿಸಿ ನ್ಯಾಯಾಲಯಕ್ಕೆ ತಿಳಿಸಿದೆ.

ಈ ವಿಷಯವಾಗಿ ಸುಪ್ರೀಂಕೋರ್ಟ್ ಶುಕ್ರವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದು, ಅಂತಿಮ ಪದವಿ ಪರೀಕ್ಷೆ ರದ್ದುಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿ ಆದಿತ್ಯ ಠಾಕ್ರೆ ಸೇರಿದಂತೆ ಕೆಲವರು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲಿದೆ.

ಕಾಲೇಜುಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಅಂತಿಮ ಅವಧಿಯ ಪರೀಕ್ಷೆಗಳನ್ನು ನಡೆಸಲಾಗುವುದೆಂದು ಕೇಂದ್ರ ಗೃಹ ಸಚಿವಾಲಯವು ಕೂಡಾ ಈಗಾಗಲೇ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News